ಶಾಲಾ-ಕಾಲೇಜುಗಳ ಬಳಿ ಪೊಲೀಸ್ ಗಸ್ತು ವ್ಯವಸ್ಥೆ

ಶಿವಮೊಗ್ಗ, ಮಾ. 5: ಶಾಲಾ-ಕಾಲೇಜುಗಳ ಬಳಿ ಮಿತಿಮೀರಿದ ವೇಗದಲ್ಲಿ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಲಾಗುವುದು. ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ಪತ್ತೆ ಹಚ್ಚುವುದರ ಜೊತೆಗೆ, ಪೊಲೀಸ್ ಗಸ್ತು ವಾಹನ ಸಂಚಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ತಿಳಿಸಿದ್ದಾರೆ.ಜಿಲ್ಲೆಯ ಸೊರಬ ಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನ ಆವರಣದಲ್ಲಿ ಆಯೋಜಿಸಲಾಗಿದ್ದ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದ ಅವರು ನಾಗರೀಕರ ಅಹವಾಲು ಆಲಿಸಿ ಮಾತನಾಡಿದರು.
ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ ಮಾಡುವುದು ಹಾಗೂ ಬೈಕ್ ಗಳಲ್ಲಿ ತ್ರಿಬಲ್ ರೈಡಿಂಗ್ ಮಾಡುವವರನ್ನು ಪತ್ತೆ ಹಚ್ಚಿ ಐಎಂಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರೆ. ವಿಳಂಬಕ್ಕೆ ಆಸ್ಪದವಿಲ್ಲದಂತೆ ಪ್ರಕರಣಗಳ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ವರದಿ ಸಲ್ಲಿಸಲಾಗುತ್ತಿದೆ. ಸಮಸ್ಯೆ ಮತ್ತು ಸಹಾಯಕ್ಕಾಗಿ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಸಾರ್ವಜನಿಕರು ಭೇಟಿ ನೀಡಿ ಅಧಿಕಾರಿಗಳ ಜೊತೆ ಚರ್ಚಿಸಬಹುದಾಗಿದೆ ಎಂದು ತಿಳಿಸಿದ್ದಾರೆ.ಯಾವುದೇ ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ ಹತ್ತಿರದ ಪೊಲೀಸ್ ಠಾಣೆ ಅಥವಾ 112 ಸಹಾಯವಾಣಿ / ಕಂಟ್ರೋಲ್ ರೂಮ್ ಗೆ ಸಂಪರ್ಕಿಸಿ ಸಹಾಯ ಪಡೆಬಹುದಾಗಿದೆ.ಪಟ್ಟಣ ಪಂಚಾಯ್ತಿ ಸಹಕಾರದೊಂದಿಗೆ, ಸೊರಬ ಪಟ್ಟಣದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಹಾಗೆಯೇ ವಾಣಿಜ್ಯ ಕಟ್ಟಡಳು ಹಾಗೂ ನಾಗರೀಕರು ತಮ್ಮ ಮನೆಗಳ ಬಳಿ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಸಭೆಯಲ್ಲಿ ಶಿಕಾರಿಪುರ ಪೊಲೀಸ್ ಉಪ ವಿಭಾಗದ ಉಪಾಧೀಕ್ಷಕರಾದ ಶಿವಾನಂದ ಮದರಕಂಡಿ, ಸೊರಬ ಇನ್ಸ್’ಪೆಕ್ಟರ್ ಭ್ಯಾಗ್ಯವತಿ, ಸಬ್ ಇನ್ಸ್ ಪೆಕ್ಟರ್ ನಾಗರಾಜ್, ಆನವಟ್ಟಿ ಠಾಣೆ ಸಬ್ ಇನ್ಸ್ ಪೆಕ್ಟರ್ ವಿಠಲ್ ಅಗಸಿ ಮೊದಲಾದವರಿದ್ದರು.