ಶಾಲಾ ಕಾಂಪೌಂಡ್ ಮೇಲೆ ಅರಳಿರುವ ರೈಲಿನ ಚಿತ್ತಾರ

ಮಧುಗಿರಿ, ಜು.೧- ಮಧುಗಿರಿಗೆ ರಾಯದುರ್ಗ ರೈಲ್ವೆ ಯೋಜನೆಯ ಕನಸು ಕನಸಾಗಿಯೇ ಉಳಿದಿದೆ. ಆದರೆ ಸರ್ಕಾರಿ ಶಾಲೆಯೊಂದರ ಕಾಂಪೌಂಡ್ ಮೇಲೆ ಅರಳಿರುವ ರೈಲು ಬೋಗಿಯ ಚಿತ್ತಾರ ದಾರಿ ಹೋಕರು, ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಪಾವಗಡ ಮುಖ್ಯ ರಸ್ತೆಯ ಕಸಬಾ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದಲ್ಲಿ ವಿದ್ಯಾರ್ಥಿಗಳನ್ನು ಅಕರ್ಷಿಸುವ ದೃಷ್ಟಿಯಿಂದ ಸರ್ಕಾರಿ ಶಾಲೆಯ ಗೋಡೆ ಮೇಲೆ ರೈಲಿನ ಚಿತ್ತಾರ ವಿನ್ಯಾಸಗೊಳಿಸಲಾಗಿದ್ದು,
ಈ ರೈಲಿನ ಚಿತ್ರ ಎಷ್ಟು ಅಕರ್ಷಕವಾಗಿದೆ ಎಂದರೆ ಈ ಮಾರ್ಗದಲ್ಲಿ ಪ್ರಯಾಣಿಸುವ ಅದೆಷ್ಟೋ ಪ್ರಯಾಣಿಕರು, ದೂರದಿಂದ ನೋಡಿ ಇಲ್ಲಿನ ರಸ್ತೆ ಬದಿಯಲ್ಲಿ ರೈಲು ಬಂದು ನಿಂತಿದೆ ಎಂದುಕೊಂಡು ಅಚ್ಚರಿಗೊಂಡು ಹತ್ತಿರಕ್ಕೆ ಬಂದು ಆನಂತರ ಚಿತ್ರ ಎಂಬುದನ್ನು ಖಚಿತಪಡಿಸಿಕೊಂಡು ತೆರಳುತ್ತಿರುವ ನಿದರ್ಶನಗಳಿವೆ.


ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವಂತಿರುವ ಬಸವನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೧ ರಿಂದ ೫ ನೇ ತರಗತಿವರೆಗೆ ಸುಮಾರು ೪೬ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸುವ ದೃಷ್ಟಿಯಿಂದ ಮುಖ್ಯ ಶಿಕ್ಷಕ, ಶಿಕ್ಷಕರು ಹಾಗೂ ಎಸ್‌ಡಿಎಂಸಿಯವರು ಗ್ರಾಮಸ್ಥರ ಸಹಕಾರದೊಂದಿಗೆ ಹಳೆಯದಾದ ಶಾಲೆಯ ಗೋಡೆಯಲ್ಲಿ ಬಣ್ಣ, ಬಣ್ಣದ ಕಾರ್ಟೂನ್ ಚಿತ್ತಾರಗಳನ್ನು ಮೂಡಿಸಿ ಅಕರ್ಷಕಗೊಳಿಸಿದ್ದಾರೆ.
ಶಾಲೆಯ ಗೋಡೆಯ ಮೇಲೆ ಅರಳಿರುವ ರೈಲು, ತರಕಾರಿ, ಹಣ್ಣು, ಸೊಪ್ಪು, ಮರ, ಹೂವು, ಕಾಡು, ಬುದ್ಧ, ಗ್ರಾಮ, ಭೂಮಿಯ ಸ್ವರೂಪ, ಗಣಿತ, ವಿಜ್ಞಾನ, ಇಂಗ್ಲಿಷ್, ಕನ್ನಡ ಪಠ್ಯ ಪುಸ್ತಕಕ್ಕೆ ಸಂಬಂಧಿಸಿದ ಬರಹ, ಚಿತ್ರಪಟ, ಪದ್ಯ, ಕವನ, ಬೇಸಾಯದ ದೃಶ್ಯ, ಮೊದಲಾದ ಚಿತ್ರ ಕಲೆಗಳು ಶಾಲೆಯ ಗೋಡೆಯನ್ನು ಅವರಿಸಿವೆ. ಮಕ್ಕಳಿಗೆ ಮತ್ತು ಪೋಷಕರಿಗೆ ಶಿಕ್ಷಣದ ಜತೆಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಾಗಿದ್ದು, ಜತೆಗೆ ಶಾಲೆಯ ಅವರಣದ ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ. ಇದರ ಜತೆಗೆ ಈ ಶಾಲೆಯಲ್ಲಿ ಪ್ರತಿವರ್ಷ ಮಾತೃ ಭೋಜನ, ಪೋಷಕರ ಪಾದ ಪೂಜೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಕೊಡಲಾಗುತ್ತಿದೆ.
ಮಕ್ಕಳನ್ನು ಆಕರ್ಷಿಸಲು ಮತ್ತು ಶಾಲೆಯಲ್ಲಿ ಚಂದದ ವಾತಾವರಣ ಸೃಷ್ಟಿಗೆ ಅಕರ್ಷಕ ಬಣ್ಣ ಬಳಿಯಲಾಗಿದೆ. ಇದು ಮಕ್ಕಳಿಗೆ ಓದಿನ ಕಡೆ ಗಮನ ಕೇಂದ್ರೀಕರಿಸಲು ಪ್ರೇರಣೆಯಾಗಿದೆ. ಈ ಗ್ರಾಮೀಣ ಶಾಲೆಯಲ್ಲಿ ಇಂಗ್ಲಿಷ್ ಕಲಿಕೆಗೆ ಒತ್ತು ನೀಡಲಾಗುತ್ತಿದೆ. ಹಾಗಾಗಿಯೇ ನಮ್ಮ ಮಕ್ಕಳು ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಪೈಪೋಟಿ ನೀಡುತ್ತಿದ್ದಾರೆ ಎನ್ನುವ ಹೆಮ್ಮೆಯಿದೆ ಎನ್ನುತ್ತಾರೆ ಶಿಕ್ಷಕರು.
ಸರ್ಕಾರಿ ಶಾಲೆ ಉಳಿಸಿ, ಬೆಳೆಸುವ ಕಾಯಕದಲ್ಲಿ ಶಿಕ್ಷಕರು ಹಾಗೂ ಗ್ರಾಮಸ್ಥರು ಮುಂದಾಗಿರುವುದು ಇತರರಿಗೆ ಮಾದರಿಯಾಗಿದ್ದು, ಸರ್ಕಾರದ ಜತೆಗೆ ಸಂಘ-ಸಂಸ್ಥೆ ಹಾಗೂ ದಾನಿಗಳು ಕೈ ಜೋಡಿಸಿದರೆ ಸರ್ಕಾರಿ ಶಾಲೆಗಳು ಅಭಿವೃದ್ಧಿಯತ್ತ ಸಾಗುತ್ತವೆ ಎಂಬುದಕ್ಕೆ ಈ ಶಾಲೆ ಮಾದರಿಯಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎನ್ನುವುದು ಸ್ಥಳೀಯರ ಆಶಯ.
ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಕಲಿಕೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಪೋಷಕರಿಗೆ ಹೊರೆಯಿಲ್ಲದೆ ಒದಗಿಸುತ್ತಿದ್ದಾರೆ. ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣವಿದೆ. ಗೋಡೆಗಳನ್ನು ನೋಡಲು ಆಕರ್ಷಣೀಯವಾಗಿ ರೂಪಿಸಿದ್ದಾರೆ. ಶಾಲೆಗೆ ಹೋಗಿ ಪಾಠ ಕೇಳಲು ಖುಷಿಯಿದೆ ಎಂದು ೪ನೇ ತರಗತಿ ವಿದ್ಯಾರ್ಥಿನಿ ಸೌಜನ್ಯ ಹರ್ಷ ವ್ಯಕ್ತಪಡಿಸಿದ್ದಾಳೆ.
ನಮ್ಮೂರ ಸರ್ಕಾರಿ ಶಾಲೆಯ ಕಾಪೌಂಡ್ ಹಾಗೂ ಗೋಡೆ ಮೇಲೆ ವಿವಿಧ ಚಿತ್ರ ರಚಿಸಿರುವುದರಿಂದ ಖಾಸಗಿ ಶಾಲೆಗಳನ್ನು ಮೀರಿಸುವ ವಾತಾವರಣವಿದೆ. ಶಿಕ್ಷಕರು ಹೇಳುವ ಪಾಠ- ಪ್ರವಚನ ಗುಣಮಟ್ಟದಿಂದ ಕೂಡಿದೆ. ನಮಗೆ ಶಾಲೆ ಹಾಗೂ ಶಿಕ್ಷಕರು ಅಚ್ಚು ಮೆಚ್ಚಾಗಿದ್ದಾರೆ ಎಂದು ೩ನೇ ತರಗತಿಯ ವಿದ್ಯಾರ್ಥಿನಿ ತೇಜು ತಿಳಿಸಿದ್ದಾರೆ.
ಸರ್ಕಾರದ ಸೌಲಭ್ಯಗಳ ಜತೆಗೆ ದಾನಿಗಳ ನೆರವಿನಿಂದ ಗುಣಮಟ್ಟದ ಸೌಕರ್ಯ ಕಲ್ಪಿಸಿ ಮಾದರಿ ಶಾಲೆಯನ್ನಾಗಿ ರೂಪಿಸಬೇಕು ಎನ್ನುವ ಹಂಬಲವಿತ್ತು. ಎಸ್‌ಡಿಎಂಸಿ ಅಧ್ಯಕ್ಷರು, ಗ್ರಾಮಸ್ಥರು, ದಾನಿಗಳು ಕೈಜೋಡಿಸಿ ನಿರೀಕ್ಷೆಗೂ ಮೀರಿ ಸಹಕಾರ ನೀಡುತ್ತಿದ್ದಾರೆ. ಶಾಲೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಗುರಿ ಹೊಂದಿದ್ದೇವೆ ಎಂದು ಶಿಕ್ಷಕ ಎಸ್.ವಿ. ರಮೇಶ್ ತಿಳಿಸಿದ್ದಾರೆ.
ಶಾಲೆಯ ಅಭಿವೃದ್ಧಿ ಮತ್ತು ಶೈಕ್ಷಣಿಕ ಪ್ರಗತಿ ಕಂಡ ಗ್ರಾಮದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಶಾಲೆಯಲ್ಲಿನ ಗುಣಮಟ್ಟದ ಶಿಕ್ಷಣವೇ ಇದಕ್ಕೆ ಕಾರಣ ಎಂದು ಮುಖ್ಯ ಶಿಕ್ಷಕಿ ಎಚ್.ಕೆ. ಸರಸ್ವತಮ್ಮ ಹೇಳಿದರು.