ಶಾಲಾ ಕಟ್ಟಡ ಕಾಮಗಾರಿ ಪರಿಶೀಲನೆ

ಧಾರವಾಡ, ಸೆ.10: ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾಗಿರುವ ಧಾರವಾಡ ತಾಲ್ಲೂಕಿನ ಕಬ್ಬೆನೂರ ಗ್ರಾಮದಲ್ಲಿ ದೆಹಲಿ ಮೂಲದ ಇಂಜಿನೀಯರ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಸಿ.ಎಸ್.ಆರ್ ನಿಧಿಯಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಶಾಲಾ ಶಿಕ್ಷಣ ಮತ್ತು ಸುಧಾರಣೆ ಇಲಾಖೆ ಉಪನಿರ್ದೆಶಕ ಎಸ್.ಎಸ್.ಕೆಳದಿಮಠ ಅವರು ಭೇಟಿ ನೀಡಿ, ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಕಾಮಗಾರಿ ಹೊಣೆ ಹೊಂದಿರುವ ನಿರ್ಮಿತಿ ಕೇಂದ್ರದ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಅವರ ಪ್ರಸ್ತಾವನೆ ಅನ್ವಯ ದೆಹಲಿ ಮೂಲದ ಇಂಜಿನೀಯರ್ಸ್ ಇಂಡಿಯಾ ಲಿಮಿಟೆಡ್ ಕಂಪನಿಯು ತನ್ನ ಸಿಎಸ್‍ಆರ್ ನಿಧಿಯಲ್ಲಿ ರೂ.3.30 ಕೋಟಿ ಅನುದಾನವನ್ನು ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ನೀಡಿದೆ. ಈ ಅನುದಾನದಲ್ಲಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣವಾಗುತ್ತಿದೆ. ಇದರಲ್ಲಿ ಶಾಲಾ ಮಕ್ಕಳಿಗೆ ಅಗತ್ಯವಿರುವ ಬೋಧನಾ ಕೊಠಡಿ, ವಾಚನಾಲಯ, ಕಂಪ್ಯೂಟರ್ ಪ್ರಯೋಗಾಲಯ, ಕ್ರೀಡಾ ಕೋಣೆ, ಸಂಗೀತ ಕಲಿಕಾ ಕೋಣೆ, ಸಭಾಭವನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

ಕಟ್ಟಡ ಕಾಮಗಾರಿ ನವೆಂಬರ್ 2022 ರೊಳಗೆ ಪೂರ್ಣಗೊಳಿಸಲು ಕೇಂದ್ರ ಸಚಿವರು ನಿರ್ದೇಶನ ನೀಡಿದ್ದು, ವಿಳಂಬ ಮಾಡದೆ ಕಾಮಗಾರಿ ಪೂರ್ಣಗೊಳಿಸಲು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಶಿವಕುಮಾರ ಪಾಟೀಲ, ಕಬ್ಬೆನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ ಉಪ್ಪಾರ ಸೇರಿದಂತೆ ಶಾಲಾ ಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.