ಶಾಲಾ ಕಟ್ಟಡದ ಕಾಮಗಾರಿಗೆ ಭೂಮಿ ಪೂಜೆ

ಬಾಗಲಕೋಟೆ: ಜು 27 : ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಉತ್ತಮ ವಸತಿಯುತ ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದ ನಿಮರ್ಮಿಸಲಾಗುತ್ತಿರುವ ಡಾ. ಎ ಪಿ ಜೆ ಅಬ್ದುಲ್ ಕಲಾಂ ವಸತಿ ಶಾಲೆಯ ಕಟ್ಟಡವನ್ನು ಅತಿ ಶೀಘ್ರದಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಗೃಹ ಮಂಡಳಿ ವತಿಯಿಂದ ನವನಗರ ಯೂನಿಟ್ 1 ರಲ್ಲಿ ಹಮ್ಮಿಕೊಳ್ಳಾಗಿದ್ದ, ಡಾ. ಎ ಪಿ ಜೆ ಅಬ್ದುಲ್ ಕಲಾಂ ವಸತಿ ಶಾಲೆ ಕಟ್ಟಡದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಎಲ್ಲ ಸಮುದಾಯದ ವಿದ್ಯಾಥಿಗಳು ಉತ್ತಮ ವಾತಾವರಣದಲ್ಲಿ ಶಿಕ್ಷಣ ಪಡೆಯಬೇಕು ಎಂಬುದು ಸರಕಾರದ ಆಶಯವಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯ ವಿದ್ಯಾಥಿಗಳು ಕೂಡ ಅತ್ಯುತ್ತಮ ವಸತಿಯುತ ಶಿಕ್ಷಣ ಪಡೆಯಬೇಕೆಂಬ ಸದ್ದುದ್ದೇಶದಿಂದ ನಗರದಲ್ಲಿ ಅಬ್ದುಲ್ ಕಲಾಂ ವಸತಿ ಶಾಲೆ ನಿರ್ಮಿಸಲಾಗುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಈ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

    ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನದಡಿ ಬಾಗಲಕೋಟೆ ನವನಗರ ಯೂನಿಟ್ 1 ರ 7 ಎಕರೆ 3 ಗುಂಟೆ ಜಾಗೆಯಲ್ಲಿ 7.5 ಕೋಟಿ ವೆಚ್ಚದಲ್ಲಿ ಕರ್ನಾಟಕ ಗೃಹ ಮಂಡಳಿ ನಿರ್ಮಾಣ ಮಾಡುತ್ತಿರುವ ಈ ವಸತಿ ಶಾಲೆಯ ಕಟ್ಟಡವು  ನೆಲಮಮಹಡಿ ಹಾಗೂ ಒಂದು ಮೇಲ್ಮಹಡಿನ್ನೊಳಗೊಂಡಿರುತ್ತದೆ.  ಇದರಲ್ಲಿಯ ಒಂದು ಬ್ಲಾಕ್‍ನ್ನು ಅಡುಗೆ ಹಾಗೂ  ವಸತಿ ಕೋಣೆಗಳಿಗೆ ಮೀಸಲಿಟ್ಟರೆ ಇನ್ನೊಂದನ್ನು ಶೈಕ್ಷಣಿಕ ಚಟುವಟಿಕೆಗಳ ಭಾಗವನ್ನಾಗಿ ಮಾಡಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು. 

ಸಮಾರಂಭದಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ಡಾ. ಎ ಪಿ ಜೆ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯ ಆನಂದ ದೊಡ್ಡುರ, ನಗರಸಭೆ ಅಧ್ಯೆಕ್ಷೆ ಜ್ಯೋತಿ ಭಜಂತ್ರಿ, ಸದಸ್ಯರಾದ ಯಲ್ಲಪ್ಪಾ ನಾರಾಯಣ, ನಾಗರತ್ನಾ ಹೆಬ್ಬಳ್ಳಿ ಸೇರಿದಂತೆ ಇತರರು ಇದ್ದರು.