ಶಾಲಾ ಆವರಣ ಯಥಾ ಸ್ಥಿತಿಗೆ ಆದೇಶ

ವಿಜಯಪುರ.ಜ೨೯:ಜನವರಿ ೧೬ನೇ ತಾರೀಖಿನಿಂದ ರೋಟರಿ ಶಾಲಾ ಮಕ್ಕಳ ಆಟದ ಆವರಣವನ್ನು ಪುರಸಭೆಯವರು ಇಂದಿರಾ ಕ್ಯಾಂಟೀನ್ ನಿರ್ಮಿಸಲು ವಶಪಡಿಸಿಕೊಳ್ಳಲು ಬಂದಿದ್ದು, ಅಂದಿನಿಂದಲೂ ನಡೆದುಕೊಂಡು ಬರುತ್ತಿದ್ದ ಗಲಾಟೆಗೆ ದೇವನಹಳ್ಳಿಯ ಘನ ನ್ಯಾಯಾಲಯದಿಂದ ಶನಿವಾರದಂದು ಯಥಾ ಸ್ಥಿತಿ ಕಾಪಾಡಿಕೊಂಡು ಹೋಗುವ ಆದೇಶ ಹೊರ ಬಿದ್ದ ನಂತರ ತಾತ್ಕಾಲಿಕವಾಗಿ ರೋಟರಿ ಶಾಲಾ ಮಕ್ಕಳು ಹಾಗೂ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಕಳೆದ ನಾಲ್ಕೈದು ದಿನಗಳಿಂದಲೂ ಪುರಸಭೆಯವರು ಗಣರಾಜ್ಯೋತ್ಸವದ ರಜಾ ದಿನವನ್ನು ಹಾಗೂ ಕೊನೆ ಶನಿವಾರ ಹಾಗೂ ಭಾನುವಾರ ರಜಾ ದಿನವನ್ನು ಬಳಸಿಕೊಂಡು, ರೋಟರಿ ಶಾಲಾ ಆವರಣದಲ್ಲಿನ ಕಾಂಪೌಂಡ್ ಪೊಲಿಸರ ರಕ್ಷಣೆಯೊಂದಿಗೆ ಕೆಡವಿದ್ದು, ಇಂದಿರಾ ಕ್ಯಾಂಟೀನ್ ನಿರ್ಮಿಸುವ ಅತ್ಯುತ್ಸಾಹದಿಂದ ರೋಟರಿ ಸಂಸ್ಥೆಯನ್ನು ದಮನಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದರು.
ರೋಟರಿ ಸಂಸ್ಥೆಯವರು ಈಗಾಗಲೇ ಹಲವಾರು ಅರ್ಜಿಗಳನ್ನು ಮಾಹಿತಿ ಕೋರಿ ಪುರಸಭೆಗೆ ನೀಡಿದ್ದು ಹಾಗೂ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿಯೂ ಅರ್ಜಿಗಳನ್ನು ನೀಡಿ ಇಂದಿರಾ ಕ್ಯಾಂಟೀನ್ ಗೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಆಗಿರುವ ರೆಸಲ್ಯೂಷನ್ ಕಾಪಿ ಕೇಳುವುದರೊಂದಿಗೆ ಹಾಗೂ ಇನ್ನಿತರೆ ದಾಖಲೆ ನೀಡಿ ಎಂದು ತಿಳಿಸಿದ್ದರೂ ಯಾವುದೇ ದಾಖಲೆಗಳನ್ನು ಸಹ ನೀಡದೆ, ವಿಷಯ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯದಿಂದ ಹೋದ ಸಮನ್ಸನ್ನು ಕೂಡ ತೆಗೆದುಕೊಳ್ಳದೆ, ಏಕಾಏಕಿ ಕಲ್ಲಿನ ಕಾಂಪೌಂಡ್ ಗೋಡೆಗಳನ್ನು ಕೆಡವಿ ದಮನ ಕಾರ್ಯ ಕೈಗೊಂಡಿದ್ದರು.
ಇದೆಲ್ಲವನ್ನು ಶನಿವಾರದಂದು ರೋಟರಿ ಸಂಸ್ಥೆಯ ನ್ಯಾಯವಾದಿಗಳಾದ ಮೋಹನ್ ಕುಮಾರ್‌ರವರು ಘನ ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಿದ ನಂತರ ಜನವರಿ ಮೂರರವರೆಗೆ ರೋಟರಿ ಸಂಸ್ಥೆಯ ಆವರಣದಲ್ಲಿ ಪುರಸಭೆಯವರು ಹಾಗೂ ಮತ್ಯಾರೂ ಯಾವುದೇ ನಿರ್ಮಾಣ ಕಾರ್ಯದಲ್ಲಿ ತೊಡಗದಂತೆ ಯಥಾ ಸ್ಥಿತಿ ಕಾಯ್ದುಕೊಂಡು ಹೋಗುವಂತೆ ಘನ ನ್ಯಾಯಾಲಯ ತಾತ್ಕಾಲಿಕ ಆದೇಶವನ್ನು ನೀಡಿದೆ ಎಂದು ರೋಟರಿ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಸಿದ್ದರಾಜುರವರು ತಿಳಿಸಿರುವರು.
ಕಿರಿಕಿರಿ;-ನ್ಯಾಯಾಲಯದ ಆದೇಶ ಬಂದ ನಂತರವು ಪುರಸಭೆಯವರು ರೋಟರಿ ಶಾಲಾ ಆವರಣದಲ್ಲಿ ಪುರಸಭೆಯೇ ಕಸ ಸಾಗಿಸುವ ವಾಹನಗಳನ್ನು ನಿಲ್ಲಿಸಿ, ಅದರಲ್ಲಿ ಗಲೀಜು ಹಾಕಿ, ಆ ಭಾಗದಲ್ಲಿ ಯಾರೂ ಓಡಾಡಲು ಸಾಧ್ಯವಾಗದಂತಹ ಕಿರಿಕಿರಿ ಉಂಟು ಮಾಡುತ್ತಿರುವ ಬಗ್ಗೆ ಕಾರ್ಯದರ್ಶಿ ಸಿದ್ದರಾಜುರವರು ಬೇಸರ ವ್ಯಕ್ತ ಪಡಿಸಿ, ಹೀಗೆ ಆದಲ್ಲಿ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆಯೂ ಇದು ಪರಿಣಾಮ ಬೀರಲಿದೆ ಎಂದು ತಿಳಿಸಿದರು.