ಶಾಲಾ ಆವರಣದಲ್ಲಿ ಮದ್ಯ ಸೇವನೆ: ಕ್ರಮಕ್ಕೆ ಸೂಚನೆ


ಮುಧೋಳ,ಜು.25: ನಗರದ ಶಾಲಾ, ಕಾಲೇಜುಗಳ ಆವರಣದಲ್ಲಿ ಮದ್ಯದ ಬಾಟಲಿಗಳು ಎಲ್ಲಿ ಬೇಕಾದಲ್ಲಿ ರಾಶಿಯಾಗಿ ಬಿದ್ದಿದ್ದು ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುವುದನ್ನು ನೋಡುತ್ತ ಕೊಡಬಾರದು ಎಂದು ಅಬಕಾರಿ ಹಾಗೂ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವ ಅರ್.ಬಿ.ತಿಮ್ಮಾಪೂರ ಹೇಳಿದರು.
ನಗರದ ತಾಲೂಕಾ ಪಂಚಾಯತ್‍ನಲ್ಲಿ ನಡೆದ ಪ್ರಥಮ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಕೂಡಲೇ ಈ ಕುರಿತು ಪೋಲಿಸ್ ಇಲಾಖೆ ಸೂಕ್ತ ನಿಗಾ ವಹಿಸಿ ಇಲ್ಲಿ ಯಾರು ಮದ್ಯ ಸೇವಿಸಾತ್ತಾರೋ ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ಸಿಪಿಐ ಅಯ್ಯನಗೌಡ ಪಾಟೀಲ ಅವರಿಗೆ ಎಚ್ಚರಿಸಿದರು. ಅಲ್ಲದೇ ತಾಲೂಕಿನಾದ್ಯಾಂತ ಮನರಂಜನೆಯ ಉದ್ದೇಶದಿಂದಿರುವ ಕ್ಲಬ್‍ಗಳಲ್ಲಿ ಇಸ್ಪೀಟ್, ಜೂಜಾಟಗಳು ನಡೆಯುತ್ತಿವೆ ಎಂದು ಸಾರ್ವಜನಿಕರಿಂದ ದೂರುಗಳು ಕೇಳಬಂದಿದ್ದು, ಇಂತಹ ನಿಯಮಗಳನ್ನು ಉಲ್ಲಂಘನೆ ಮಾಡಿ ಮನರಂಜನೆ ಹೆಸರಿನಲ್ಲಿ ಜೂಜಾಟ ಮತ್ತು ಇನ್ನಿತರ ಚಟುವಟಿಕೆಗಳು ನಡೆಯುತ್ತಿದ್ದರೂ ಅದಕ್ಕೆ ಕಡಿವಾಣ ಹಾಕಬೇಕಾದ ಪೋಲಿಸ್ ಇಲಾಖೆ ಸುಮ್ಮನೆ ಕುಳಿತುಕೊಳ್ಳದೇ ಅಂತಹವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಅವರು ಪೋಲಿಸ್ ಇಲಾಖೆಗೆ ತಿಳಿಸಿದರು.
ನಗರದ ಸಾರ್ವಜನಿಕರ ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ರೋಗಿಗಳೊಂದಿಗೆ ಸೌಜನ್ಯ ಹಾಗೂ ಗೌರವದಿಂದ ನಡೆದುಕೊಳ್ಳಬೇಕು. ಕಡು ಬಡವರು ಅಲ್ಲಿಗೆ ತಮ್ಮ ರೋಗ ರುಜಿನಗಳಿಗೆ ಚಿಕಿತ್ಸೆ ಪಡೆಯಲೆಂದು ಬಂದಾಗ ನೊಂದ ಬರುವ ರೋಗಿಗಳೊಂದಿಗೆ ಅಸಭ್ಯವಾಗಿ ವರ್ತನೆ ಮಾಡುವುದಾಗಲಿ ಅಥವಾ ಅವರೊಂದಿಗೆ ಅಸಭ್ಯವಾಗಿ ನಡೆದುಕೊಂಡ ಬಗ್ಗೆ ದೂರುಗಳು ಕೇಳಿಬಂದರೆ ನಾನು ಸಹಿಸುವುದಿಲ್ಲ. ಅಂತಹವರ ಮೇಲೆ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯ ವೈದ್ಯಾಧಿಕಾರಿ ಎಚ್ಚರಿಸಿದರು.
ಅಂಗವಿಕಲ ಸೌಲಭ್ಯಗಳನ್ನು ಸರ್ಕಾರಿ ನೌಕರರು ಪಡೆಯುತ್ತಿದ್ದರೆ, ಅಂತಹವರ ಪಟ್ಟಿ ನೀಡಿದರೆ ಅದನ್ನು ಈ ಕೂಡಲೇ ರದ್ದುಪಡಿಸಲಾಗುವುದು ಹಾಗೂ ಅಂಗವಿಕಲ ಮಕ್ಕಳಿಗೆ ಯಾವುದೇ ರೀತಿಯಿಂದ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಅವರು ತಾಲೂಕಾ ಪಂಚಾಯತಿಯ ವಿಕಲಚೇತನರ ಅಧಿಕಾರಿಗೆ ಸೂಚಿಸಿದರು.
ನಗರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುತ್ತಿರುವ ಬಗ್ಗೆ ಸೂಕ್ತ ತಜ್ಞರಿಂದ ತಪಾಸಣೆ ನಡೆಸಿ, ವರದಿ ಸಲ್ಲಿಸಬೇಕು. ಒಂದು ಪಕ್ಷ ಸರಿಯಾಗಿ ಕಾರ್ಯ ನಿರ್ವಹಿಸದ ಘಟಕಗಳ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಸೂಚಿಸಿದ ಅವರು, ಮಳೆಯಾಗಿ ಹೊಳೆಯಲ್ಲಿ ಬರುವ ನೀರಿನಿಂದ ಹಲವಾರು ರೋಗ-ರುಜಿನಗಳು ಬರುವ ಸಂಭವವಿರುವದರಿಂದ ಅದಕ್ಕೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಈ ವಿಷಯದಲ್ಲಿ ಸರ್ಕಾರಕ್ಕೆ ಯಾವುದೇ ರೀತಿ ಕೆಟ್ಟ ಹೆಸರು ಬರದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವಂತೆ ಅವರು ತಹಶೀಲದಾರ, ಪೌರಾಯುಕ್ತ ಹಾಗೂ ತಾಲೂಕಾ ಮುಖ್ಯ ವೈದ್ಯಾಧಿಕಾರಿಗಳಿಗೆ ಆದೇಶಿಸಿದರು.
ತಾಲೂಕಿನಾದ್ಯಾಂತ ಮಳೆ ಸುರಿಯುತ್ತಿದ್ದು, ಮಾರಕ ರೋಗಗಳಾದ ಡೆಂಗ್ಯೂ, ಮಲೇರಿಯಾ, ವಾಂತಿ, ಬೇಧಿಗಳು ಮುಂತಾದ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಅವರು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ತಹಶೀಲದಾರ ವಿನೋದ ಹತ್ತಳ್ಳಿ, ತಾಪಂ ಆಡಳಿತಾಧಿಕಾರಿ ಸಿದ್ಧರಾಮ ಉಕ್ಕಲಿ, ತಾಪಂ ಇಓ ಸಂಜಯ ಹಿಪ್ಪರಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.