ಶಾಲಾ ಆರಂಭೋತ್ಸವ ಹಬ್ಬದಂತೆ ಆಚರಿಸಿ

ಇಂಡಿ:ಮೇ.27:ತಾಲೂಕಿನ್ಯಾದಂತ ಮೇ 29 ರಿಂದ ಶಾಲೆಗಳು ಪ್ರಾರಂಭವಾಗುತ್ತಿದ್ದು ಅಂದು ಪ್ರಾರಂಭೋತ್ಸವವನ್ನು ಹಬ್ಬದಂತೆ ಆಚರಿಸಿ, ಇಲಾಖೆ ನೀಡಿರುವ ಶೈಕ್ಷಣಿಕ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಸಿ 2023-24 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಮತ್ತಷ್ಟು ಗುಣಾತ್ಮಕಗೊಳಿಸಲು ಈಗಿನಿಂದಲೇ ಕ್ರಿಯಾಯೋಜನೆ ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಎಂದು ಕ್ಷೇತ್ರಶಿಕ್ಷಣಾಧಿಕಾರಿವಸಂತ ರಾಠೋಡ ಹೇಳಿದರು.

ಪಟ್ಟಣದ ಗುರುಭವನದಲ್ಲಿ ನಡೆದ ತಾಲೂಕಿನ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಲಾ ಆರಂಭೋತ್ಸವ ಹಬ್ಬದಂತೆ ಹಸಿರು ತೋರಣಗಳಿಂದ ಸಿಂಗರಿಸಿ ಆಕರ್ಷಣೀಯಗೊಳಿಸಿ,ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಿ,ಮೊದಲದಿನ ಸಿಹಿ ಊಟ ಬಡಿಸಿ,ಗೊಂದಲ ಮೂಲಭೂತ ಸೌಲಭ್ಯಗಳ ಕೊರತೆ ಎದುರಾಗದಂತೆ ಎಚ್ಚರಿಕೆ ವಹಿಸಿ ಎಂದರು.

ಮೇ, 29 ರಂದೇ ಶಾಲೆಗೆ ಎಲ್ಲ ಶಿಕ್ಷಕರು ಹಾಜರಾಗತಕ್ಕದ್ದು,ಮೊದಲಿಗೆ ಶಾಲಾ ಕೊಠಡಿಗಳು,ಆವರಣ,ಅಡುಗೆ ಕೋಣೆ,ಅಡುಗೆ ಪಾತ್ರೆಗಳು ಅಹಾರ ದಾನ್ಯಗಳು, ನೀರಿನ ವ್ಯವಸ್ಥೆ ಇತ್ಯಾದಿ ಗಳನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸಿ ಆಣಿಗೊಳಿಸಿಕೊಳ್ಳಿ ಎಂದು ಸೂಚಿಸಿದರು.

ಶಾಲಾ ಮೊದಲ ದಿನವೇ ಶಾಲಾ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಸಿದ್ದಗೊಳಿಸಿಕೊಳ್ಳಿ ಎಂದು ಸೂಚಿಸಿದ ಅವರು ಶಾಲಾ ವೇಳಾ ಪಟ್ಟಿಯಂತೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸತಕ್ಕದ್ದು ಎಂದ ಅವರು ವಿವಿಧ ಕ್ಲಬ್ ಗಳ ರಚನೆ ಅವುಗಳ ಕ್ರಿಯಾಯೋಜನೆ ತಯಾರಿಕೆ, ಮತ್ತಿತರ ಕಾರ್ಯಗಳಲ್ಲಿ ಗಮನ ಹರಿಸಿ ಎಂದರು.

ಶಾಲೆಗೆ ಬಾರದ ಮಕ್ಕಳ ಮನೆಗೆ ಹೋಗಿ ಪೋಷಕರ ಮನವೊಲಿಸಿ ಆ ಮಕ್ಕಳು ಶಾಲೆಯಿಂದ ವಂಚಿತರಾಗದಂತೆ ಕ್ರಮವಹಿಸಿ ಎಂದು ಸೂಚಿಸಿದರು.

ವಿವಿಧ ಶಾಲೆಯ ಮುಖ್ಯೋಪಾಧ್ಯಾಯರು,ಇಲಾಖಾ ಸಿಬ್ಬಂದಿ ಮತ್ತಿತರಿದ್ದರು.