ಶಾರ್ಟ್ ಸಕ್ರ್ಯೂಟ್‍ನಿಂದ ಎರಡು ಎಕರೆ ಬೆಂಕಿಗೆ ಆಹುತಿ

ಕೆ.ಆರ್.ಪೇಟೆ. ಏ.30: ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಎರಡು ಎಕರೆ ಭತ್ತದ ಹುಲ್ಲು ಬೆಂಕಿಗೆ ಆಹುತಿಯಾಗಿರುವ ಘಟನೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಳೇಗೌಡನ ಕೊಪ್ಪಲಿನಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಸಣ್ಣ ಕಾಳೇಗೌಡರಿಗೆ ಸೇರಿದ ಹುಲ್ಲಿನ ಮೆದೆಯ ಮೇಲ್ಬಾಗ ವಿದ್ಯುತ್ ತಂತಿಗಳು ಹಾಯ್ದು ಹೋಗಿದ್ದು ಹುಲ್ಲಿಗೆ ತಂತಿಗಳು ತಗುಲಿದ ಪರಿಣಾಮ ಮೆದೆಗೆ ಬೆಂಕಿ ಹತ್ತಿಕೊಂಡಿದೆ. ಸ್ಥಳೀಯರು ಬೆಂಕಿ ಬಿದ್ದಿರುವ ವಿಷಯವನ್ನು ಮಾಲೀಕರಿಗೆ ತಿಳಿಸಿದ್ದಾರೆ. ಕೂಡಲೇ ಅವರು ಪಟ್ಟಣದ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದು ಠಾಣಾಧಿಕಾರಿ ಶಿವಣ್ಣ ನೇತೃತ್ವದ ಅಗ್ನಿಶಾಮಕ ಸಿಬ್ಬಂಧಿಗಳು ಘಟನಾ ಸ್ಥಳಕ್ಕೆ ಆಗಮಿಸಿ ವಿದ್ಯುತ್ ಪ್ರವಹಿಸದಂತೆ ಲೈನ್ ಕಡಿತಗೊಳಿಸಿ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ವಿದ್ಯುತ್ ಲೈನ್ ಇರುವ ಕಡೆಗಳಲ್ಲಿ ಯಾವುದೇ ಕಾರಣಕ್ಕೂ ಹುಲ್ಲಿನ ಮೆದೆಗಳನ್ನು ಹಾಕದಂತೆ ಗ್ರಾಮಸ್ಥರಿಗೆ ಶಿವಣ್ಣ ಮನವರಿಕೆ ಮಾಡಿದರು. ಕಾರ್ಯಾಚರಣೆಯ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂಧಿಗಳಾದ ದಿನೇಶ್,ಅವಿನಾಶ್, ಶಿವಮೂರ್ತಿ ಸೇರಿದಂತೆ ಹಲವರು ಹಾಜರಿದ್ದರು.