ಶಾರ್ಟ್ ಸಕ್ರ್ಯೂಟ್‍ನಿಂದ ಧಗಧಗನೆ ಹೊತ್ತಿ ಉರಿದ ಟೇಲರ್ ಅಂಗಡಿ

ಬೀದರ:ಆ.6: ನಗರದ ಮೋಹನ್ ಮಾರ್ಕೆಟ್‍ನಲ್ಲಿರುವ ಜೆಡಿಎಸ್ ಕಚೇರಿ ಸಂಕೀರ್ಣದಲ್ಲಿರುವ ಭಾವಸಾರ್ ಲೇಡಿಸ್ ಮತ್ತು ಜೆಂಟ್ಸ್ ಟೇಲರ್ ಅಂಗಡಿ ಆಗಸ್ಟ್ 5ರ ನಸುಕಿನ ಜಾವ ಶಾರ್ಟ್ ಸಕ್ರ್ಯೂಟ್‍ನಿಂದ ಸುಟ್ಟು ಕರಕಲಾಗಿದೆ. ಅಂಗಡಿಯಲ್ಲಿರುವ ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಸಮವಸ್ತ್ರ ಬಟ್ಟೆಗಳು, ಟೇಬಲ್ ಮತ್ತು ಕುರ್ಚಿಗಳು, ವಿವಿಧ ರೀತಿಯ ಹೊಲಿಗೆಯಂತ್ರಗಳು ಹಾಗೂ ಫ್ಯಾನ್‍ಗಳು ಸೇರಿದಂತೆ ಇನ್ನಿತರ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಇತ್ತಿಚಿಗೆ ವಿವಿಧ ಶಾಲೆಯ ಮಕ್ಕಳ ಸಮವಸ್ತ್ರದ ಆರ್ಡರ್ ತೆಗೆದುಕೊಳ್ಳಲಾಗಿತ್ತು. ಹೀಗಾಗಿ ಸುಮಾರು 4 ಲಕ್ಷ ಮೌಲ್ಯದ ವಿದ್ಯಾರ್ಥಿಗಳ ಬಟ್ಟೆ ಒಂದೇ ಸಾರಿ ತಂದಿಡಲಾಗಿತ್ತು. ಹೀಗಾಗಿ ಬಟ್ಟೆ ಮತ್ತು ಯಂತ್ರಗಳು ಸೇರಿ ಸುಮಾರು 8 ಲಕ್ಷ ಮೌಲ್ಯದ ಸಾಮಾನುಗಳು ಸುಟ್ಟುಹೋಗಿವೆ ಎಂದು ಅಂಗಡಿಯ ಮಾಲಿಕ ಸುರೇಶ ತುಕಾರಾಮ ಸೂರ್ಯನ್ ತಿಳಿಸಿದ್ದಾರೆ.

ನಸುಕಿನ ಜಾವ ಸುದ್ದಿ ತಿಳಿದ ತಕ್ಷಣ ಮಾಲಿಕ ಸುರೇಶ ಅವರು ಅಂಗಡಿ ಕಡೆಗೆ ಆಗಮಿಸಿದ್ದಾರೆ. ನೋಡನೋಡುವಷ್ಟರಲ್ಲಿ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿಯುತ್ತಿರುವುದನ್ನು ಕಂಡ ಅವರು ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬೀದರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಡವನಾದ ನಾನು ಈ ಟೇಲರ್ ಅಂಗಡಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದೆ. ಈಗ ಇದೂ ಕೂಡಾ ಶಾರ್ಟ್ ಸಕ್ರ್ಯೂಟ್‍ನಿಂದ ಸುಟ್ಟು ಹೋಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೂಕ್ತ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.