ಶಾರ್ಟ್‌ಸರ್ಕ್ಯೂಟ್:ತೆಂಗು, ಮಾವಿಗೆ ಹಾನಿ

ತುರುವೇಕೆರೆ, ಫೆ. ೮- ತೆಂಗಿನ ತೋಟವೊಂದರಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್‌ನಲ್ಲಿ ಶಾರ್ಟ್‌ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ತೆಂಗು, ಮಾವು, ಹುಣಸೆ ಮತ್ತು ತೇಗದ ಮರಗಳು ಸುಟ್ಟು ಹೋಗಿರುವ ಘಟನೆ ತಾಲ್ಲೂಕಿನ ದ್ಯಾಮಸಂದ್ರದಲ್ಲಿ ನಡೆದಿದೆ. ತಾಲ್ಲೂಕಿನ ದಂಡಿನಶಿವರ ಹೋಬಳಿಯ ದ್ಯಾಮಸಂದ್ರ ಗ್ರಾಮದ ರೈತ ಡಿ.ಎಸ್. ರಾಜಶೇಖರ್ ಎಂಬುವರಿಗೆ ಸೇರಿದ ತೋಟದಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್‌ನಲ್ಲಿ ಇದ್ದಕ್ಕಿದ್ದಂತೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ. ಈ ಬೆಂಕಿ ತೆಂಗಿನ ಮರಗಳಿಗೆ ಆವರಿಸಿದ್ದು, ಫಲ ಬಿಡುವ ಸುಮಾರು ೨೫ಕ್ಕೂ ಅಧಿಕ ತೆಂಗಿನ ಮರಗಳು, ಮಾವಿನ ಮರಗಳು ಹಾಗೂ ಮೂರು ಹುಣಸೆ ಮರ, ತೇಗದ ಮರಗಳಿಗೂ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋಗಿವೆ.
ಈ ವಿದ್ಯುತ್ ಅವಘಡಕ್ಕೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿತನವೇ ಕಾರಣ. ಎಲ್ಲೆಂದರಲ್ಲಿ ತೋಟಗಳಲ್ಲಿ ವಿದ್ಯುತ್ ಲೈನ್ ಎಳೆಯುತ್ತಾರೆ. ಕೊಂಚ ಸಮಸ್ಯೆಯಾದರೂ ಅತ್ತ ಗಮನಹರಿಸುವುದಿಲ್ಲ ಎಂದು ಆಕ್ರೋಶ ಹೊರ ಹಾಕಿರುವ ರೈತರು, ಈ ವಿದ್ಯುತ್ ಅವಘಡದಿಂದ ಉಂಟಾಗಿರುವ ನಷ್ಟವನ್ನು ಬೆಸ್ಕಾಂ ಅಥವಾ ಸರ್ಕಾರದಿಂದ ಭರಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ದಂಡಿನಶಿವರ ಬೆಸ್ಕಾಂ ಅಧಿಕಾರಿ ಸೋಮಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.