ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಚಿಕಿತ್ಸೆ

ಧಾರವಾಡ,ಮೇ30: ಕೋವಿಡ್ ವಿರುದ್ಧ ಇಡೀ ಜಗತ್ತೇ ಹೋರಾಡುತ್ತಿದೆ. ನಮ್ಮ ದೇಶ ಹಾಗೂ ರಾಜ್ಯದಲ್ಲಿಯೂ ಸಮರೋಪಾದಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಹೋರಾಟ ನಡೆದಿದೆ.ಧಾರವಾಡದಲ್ಲಿ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಅವರ ಇಚ್ಛಾಶಕ್ತಿಯ ಪರಿಣಾಮವಾಗಿ ಜಿಲ್ಲಾಡಳಿತ, ಜಿಲ್ಲಾಸ್ಪತ್ರೆ,ಕಿಮ್ಸ್ ಹಾಗೂ ಡಿಮ್ಹಾನ್ಸ್ ಸಹಯೋಗದಲ್ಲಿ ಸ್ಥಾಪಿಸಿರುವ ಕೋವಿಡ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಜೊತೆಗೆ ಅವರ ಕುಟುಂಬದ ಸದಸ್ಯರಿಗೆ ಸಮೂಹ ಆಪ್ತಸಮಾಲೋಚನೆ ಮೂಲಕ ಆತ್ಮಸ್ಥೈರ್ಯ ತುಂಬುವ ಕಾರ್ಯ ನಡೆದಿದೆ. ವೈದ್ಯರ ಈ ಕಾರ್ಯಕ್ಕೆ ರೋಗಿಗಳು ಹಾಗೂ ಅವರ ಕುಟುಂಬದ ಸದಸ್ಯರು ಕೃತಜ್ಞತೆ ವ್ಯಕ್ತಪಡಿಸುತ್ತಿದ್ದಾರೆ.
ಕೋವಿಡ್ ನಿಯಂತ್ರಣಕ್ಕೆ ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾಡಳಿತ ವ್ಯಾಪಕ ಕ್ರಮ ಕೈಗೊಂಡಿದೆ. ಜಿಲ್ಲಾಸ್ಪತ್ರೆ, ಕಿಮ್ಸ್ ಕೊರೊನಾ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಜಿಲ್ಲೆಯಲ್ಲಿ ಕೊರೊನಾ ಚಿಕಿತ್ಸೆಗೆ ಇನ್ನಷ್ಟು ಹಾಸಿಗೆಗಳನ್ನು ಹೆಚ್ಚಿಸಬೇಕೆಂದು ಪಣತೊಟ್ಟ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಜಿಲ್ಲಾಸ್ಪತ್ರೆಯ ಆವರಣದಲ್ಲಿ ಬಹುತೇಕ ಪೂರ್ಣಗೊಂಡಿದ್ದ ತಾಯಿ ಮತ್ತು ಶಿಶುಗಳ ವಿಭಾಗ( ಎಂ.ಸಿ.ಹೆಚ್.) ಕಟ್ಟಡದಲ್ಲಿ ಮತ್ತೊಂದು ಕೋವಿಡ್ ಆಸ್ಪತ್ರೆ ಪ್ರಾರಂಭಿಸಲು ಪ್ರೇರಣೆ ನೀಡಿದಾಗ ಜಿಲ್ಲಾಸ್ಪತ್ರೆಯು ಕಟ್ಟಡ ಹಾಗೂ ಆಕ್ಸಿಜನ್ ಪೂರೈಕೆ ಮೂಲಭೂತ ಸೌಕರ್ಯ ಒದಗಿಸಿತು. ಕಿಮ್ಸ್ ನಾಲ್ಕು ಜನ ಫಿಜಿಸಿಯನ್‍ಗಳನ್ನು ನಿಯೋಜಿಸಿತು. ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ(ಡಿಮ್ಹಾನ್ಸ್) 26 ಜನ ಡ್ಯೂಟಿ ವೈದ್ಯರು, ನಸಿರ್ಂಗ್ ಹಾಗೂ ಸಹಾಯಕ ಸಿಬ್ಬಂದಿ ನಿಯೋಜಿಸಿ ಆಸ್ಪತ್ರೆಯ ಉಸ್ತುವಾರಿಯನ್ನೂ ಕೂಡ ನಿರ್ವಹಿಸುತ್ತಿದೆ.
ಕೋವಿಡ್ ಸೋಂಕು ದೃಢಪಟ್ಟಾಗ ಎಂತಹ ವ್ಯಕ್ತಿಗಳೂ ಕೂಡ ಕೆಲಹೊತ್ತು ಕುಗ್ಗುತ್ತಾರೆ.ಅಂತಹ ಸಂದರ್ಭಗಳಲ್ಲಿ ಕೋವಿಡ್ ಸೋಂಕಿತರು ಹಾಗೂ ಅವರ ಕುಟುಂಬದ ಸದಸ್ಯರಲ್ಲಿ ಆತಂಕ ಉಂಟಾಗುವುದು ಸಹಜ , ನೆಗಡಿ,ಜ್ವರ ಬಂದಾಗ ಏನು ಮುಂಜಾಗ್ರತೆ ಕೈಗೊಳ್ಳಬೇಕಾದ ಅರಿವು ಮೂಡಿಸುವುದು ಮುಖ್ಯವಾಗಿರುತ್ತದೆ. ರೋಗಿಗಳು ಮತ್ತು ಅವರ ಕುಟುಂಬದ ಸದಸ್ಯರಲ್ಲಿ ಭರವಸೆ ಹೆಚ್ಚಿಸಲು ಸೈಕೋಥೆರಪಿ ಹಾಗೂ ಸಮೂಹ ಆಪ್ತ ಸಮಾಲೋಚನೆ ಕಾರ್ಯ ಕೈಗೊಳ್ಳಲಾಗುತ್ತಿದೆ.ಈ ಕಾರ್ಯಕ್ಕೆ ಸೋಂಕಿತರು ಹಾಗೂ ಆರೈಕೆದಾರರು ಮೆಚ್ಚುಗೆ ವ್ಯಕ್ತಪಡಿಸಿ ಸ್ವಯಂ ಪ್ರೇರಿತರಾಗಿ ಲಿಖಿತ ಅಭಿಪ್ರಾಯ ವ್ಯಕ್ತಪಡಿಸಿರುವುದು ನಮಗೂ ಉತ್ಸಾಹ ಹೆಚ್ಚಿಸಿದೆ ಎಂದು ಡಿಮ್ಹಾನ್ಸ್ ಕೋವಿಡ್ ಆಸ್ಪತ್ರೆಯ ನೋಡಲ್ ವೈದ್ಯಾಧಿಕಾರಿ ಡಾ.ಆದಿತ್ಯ ಪಾಂಡುರಂಗಿ ಹೇಳುತ್ತಾರೆ.
ಮನಃಶಾಸ್ತ್ರಜ್ಞೆ ಅಶ್ವಿನಿ ಪಾಟೀಲ ಮುಂತಾದವರು ಈ ಕಾರ್ಯದಲ್ಲಿ ಕೈಜೋಡಿಸುತ್ತಿದ್ದಾರೆ.ಡಿಮ್ಹಾನ್ಸ್ ನಿರ್ದೇಶಕ ಡಾ.ಮಹೇಶ ದೇಸಾಯಿ ಮಾರ್ಗದರ್ಶನ ನೀಡುತ್ತಿದ್ದಾರೆ.