ಶಾರಿಖ್ ಮನೆಯಲ್ಲಿ ಸ್ಫೋಟಕ ಪತ್ತೆ

ಮಂಗಳೂರು, ನ.೨೧- ಆಟೋ ರಿಷಿ ಸ್ಫೋಟ ಪ್ರಕರಣದ ಆರೋಪಿ ಮುಹಮ್ಮದ್ ಶಾರಿಖ್‌ನಿಂದ ವಶಪಡಿಸಿಕೊಂಡ ಮೊಬೈಲ್ ಫೋನ್ ಹಾಗೂ ಕುಟುಂಬದವರು ಆತ ಶಾರಿಕ್ ಎಂದು ಗುರುತಿಸಿದ್ದಾರೆ. ಈತನ ಮೇಲೆ ಮಂಗಳೂರಿನ ಪೂರ್ವ ಮತ್ತು ಉತ್ತರ ಪೊಲೀಸ್ ಠಾಣೆ ಹಾಗೂ ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಎರಡು ಪ್ರಕರಣದಲ್ಲಿ ದಸ್ತಗಿರಿಯಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಶಾರಿಖ್‌ನ ಮೈಸೂರಿನ ಬಾಡಿಗೆ ಮನೆಯಲ್ಲಿ ಹಲವು ಸ್ಫೋಟಕ ವಸ್ತುಗಳು ಪತ್ತೆಯಾಗಿವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿ ಮುಹಮ್ಮದ್ ಶಾರಿಖ್ (೨೪) ಆರೋಪಿಯಾಗಿದ್ದಾನೆ. ಆಟೋದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡಿರುವ ಶಂಕಿತ ಶಾರೀಖ್‌ನ ಚಿಕ್ಕಮ್ಮ, ಸಹೋದರಿ ಶಿವಮೊಗ್ಗದಿಂದ ಮಂಗಳೂರಿನ ಆಸ್ಪತ್ರೆಗೆ ಆಗಮಿಸಿದ್ದು ಆತನ ಗುರುತು ಪತ್ತೆ ಹಚ್ಚಿದ್ದಾರೆ. ಶಾರಿಖ್ ಮಂಗಳೂರಿನ ಗೋಡೆ ಬರಹದ ಆರೋಪಿ ಕೂಡ ಆಗಿದ್ದು, ವಿಧ್ವಂಸಕ ಕೃತ್ಯ ಎಸೆಗಲು ಸಂಚು ರೂಪಿಸಿದ್ದು, ಆತ ಗುಣಮುಖನಾದ ಬಳಿನ ಕಸ್ಟಡಿಗೆ ತೆಗೆದುಕೊಂಡು ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಹೇಳಿದರು.ಈತ ೨೦೨೦ರಲ್ಲಿ ಮಂಗಳೂರು ನಗರದಲ್ಲಿ ಕಂಡುಬಂದ ಪ್ರಚೋದನಕಾರಿ ಗೋಡೆ ಬರಹ ಪ್ರಕರಣದ ಆರೋಪಿಗಳಲ್ಲಿ ಓರ್ವನಾಗಿದ್ದ. ಶಾರಿಖ್ ವಿರುದ್ಧ ೨೦೨೨ರ ಸೆ.೧೯ರಂದು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಈತ ೧ನೇ ಆರೋಪಿಯಾಗಿದ್ದಾನೆ. ಪ್ರಕರಣ ದಾಖಲಾದ ನಂತರ ಶಾರಿಕ್ ಅಲ್ಲಿಂದ ತಲೆಮರೆಸಿಕೊಂಡು ಮೈಸೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಎಂದರು.ಶಾರಿಖ್ ಮೈಸೂರಿನಲ್ಲಿ ಮೋಹನ್ ಕುಮಾರ್ ಎನ್ನುವವರ ಮನೆಯಲ್ಲಿ ವಾಸವಿದ್ದು, ಆತನ ಮೈಸೂರಿನ ಬಾಡಿಗೆ ಮನೆಯಲ್ಲಿ ಹಲವು ಸ್ಫೋಟಕ ವಸ್ತು ಪತ್ತೆಯಾಗಿದ್ದು, ಮತ್ತೊಂದು ಫೇಕ್ ಐಡಿ ಪಡೆದು ಕೊಯಮುತ್ತೂರಿನಲ್ಲಿ ಕೂಡ ಈತ ಇದ್ದ ಎನ್ನಲಾಗಿದೆ. ಈತ ಸೆ.೮ರಂದು ಒಂದು ಬಾರಿ ಮಂಗಳೂರಿಗೆ ಬಂದಿದ್ದು, ಜನನಿಬಿಡ ಪ್ರದೇಶ ಸೇರಿದಂತೆ ಹಲವು ಪ್ರದೇಶ ವೀಕ್ಷಿಸಿ ತೆರಳಿದ್ದ ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ ಎಂದು ತಿಳಿಸಿದರು.ಈ ಘಟನೆಗೆ ಸಂಬಂಧಿಸಿದಂತೆ ಮೈಸೂರಿನಿಂದ ಇಬ್ಬರು ಹಾಗೂ ಮಂಗಳೂರಿನ ಒಬ್ಬರನ್ನ , ಊಟಿಯಿಂದ ಒಬ್ಬರನ್ನು ವಶಕ್ಜೆ ಪಡೆದಿದ್ದು, ಶಾರೀಕ್ ವಿದೇಶದ ಒಂದು ಟೆರರ್ ಸಂಘಟನೆಯ ಪ್ರಭಾವಕ್ಕೆ ಒಳಗಾಗಿದ್ದು, ತೀರ್ಥಹಳ್ಳಿಯ ಅಬ್ದುಲ್ ಮತೀನ್ ತಾಹಾ ಇದರ ಮೈನ್ ಹ್ಯಾಂಡ್ಲರ್ ಆಗಿದ್ದು, ಅವನು ತಲೆಮರೆಸಿಕೊಂಡಿದ್ದು, ಎನ್.ಐ.ಎ ಎರಡು ಲಕ್ಷ ರಿವಾರ್ಡ್ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ನ.೧೯ರಂದು ಮೈಸೂರಿನಿಂದ ಹೊರಟಿದ್ದ ಶಾರಿಕ್ ಹೂಣಸೂರು, ಮಡಿಕೇರಿ, ಮತ್ತೂರು, ಬಿ.ಸಿ.ರೋಡ್ ಮೂಲಕ ಮಂಗಳೂರಿಗೆ ಆಗಮಿಸಿ ನಗರ ಹೊರವಲಯದಲ್ಲಿ ಬಸ್ಸಿನಿಂದ ಇಳಿದು ನಂತರ ಆಟೋದಲ್ಲಿ ಪಂಪವೆಲ್ ಕಡೆಗೆ ಹೋಗುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ. ಮೈಸೂರಿನಲ್ಲಿ ಆರೋಪಿ ವಾಸವಿದ್ದ ಬಾಡಿಗೆ ಮನೆಯಿಂದ ಸಲ್ಫೆಕ್ಸ್ ಸಲ್ಫರ್ ಪೌಡರ್, ನಟ್ ಬೋಲ್ಡ್‌ಗಳು, ಸರ್ಕ್ಯೂಟ್‌ಗಳು, ಮಲ್ಟಿ ಫಂಕ್ಷನ್ ಡಿಲೆ ಟೈಮರ್, ಗ್ರೈಂಡರ್, ಮಿಕ್ಸರ್, ಮ್ಯಾಚ್ ಬಾಕ್ಸ್, ಬ್ಯಾಟರಿ, ಮೈಕ್ಯಾನಿಕಲ್ ಟೈಮರ್, ಆಧಾರ್ ಕಾರ್ಡ್, ಅಲ್ಯೂಮಿನಿಯಂ ಫೈಲ್ ಸಿಮ್ ಕಾರ್ಡ್‌ಗಳು, ಮೊಬೈಲ್‌ನ ಡಿಸ್‌ಪ್ಲೆಗಳು, ಸ್ಫೋಟಕಕ್ಕೆ ಬಳಸುವ ವಿವಿಧ ಬಗೆಯ ಕೆಮಿಕಲ್ಸ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಡಿಜಿಪಿ ಹೇಳಿದ್ದಾರೆ. ಸುಟ್ಟ ಗಾಯಗೊಂಡಿರುವ ಆರೋಪಿ ಗುಣಮುಖನಾದ ನಂತರ ಆತನನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ಮಾಡಲಾಗುವುದು. ಈ ಪ್ರಕರಣದ ತನಿಖೆಗೆ ಎಸಿಪಿ ಪರಮೇಶ್ವರ ಹೆಗಡೆಯವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಅವರು ವಿವರಿಸಿದರು.