ಶಾಮಿಯಾನ ಉದ್ಯಮಕ್ಕೆ ಅವಕಾಶ ಕಲ್ಪಿಸಲು ಮನವಿ

ಹುಬ್ಬಳ್ಳಿ, ಏ 6: ಖಾಸಗಿ ಕಾರ್ಯಕ್ರಮಗಳನ್ನು ಎಂದಿನಂತೆ ನಡೆಸಲು ಅನುಮತಿ ನೀಡುವ ಮೂಲಕ ಶಾಮಿಯಾನ ಉದ್ಯಮ ನಡೆಸಲು ಅವಕಾಶ ಕಲ್ಪಿಸುವಂತೆ ಕರ್ನಾಟಕ ರಾಜ್ಯ ಶಾಮಿಯಾನ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘ ಗಂಗಾವತಿ ಸರ್ಕಾರಕ್ಕೆ ಮನವಿ ಮಾಡಿದೆ.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಶಿವಕುಮಾರ್ ಹಿರೇಮಠ, ಈಗಾಗಲೇ ಕೊರೊನಾ ಹಿನ್ನೆಲೆಯಲ್ಲಿ ಒಂದುವರೆ ವರ್ಷದಿಂದ ಶಾಮಿಯಾನ ಉದ್ಯಮ ನೆಲಕಚ್ಚಿದೆ. ರಾಜ್ಯದಲ್ಲಿ ಸಾವಿರಾರು ಮಾಲೀಕರು ಹಾಗೂ ಕಾರ್ಮಿಕರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಇದೀಗ ಮದುವೆ ಕಾರ್ಯಕ್ರಮಗಳ ಅವಧಿ ಪ್ರಾರಂಭವಾಗಿದ್ದು, ಕಾರ್ಯಕ್ರಮಗಳಿಗೆ ಅನುಮತಿ ನೀಡಿದರೆ ಎಲ್ಲ ಕ್ಷೇತ್ರದಲ್ಲೂ ಉದ್ಯೋಗ ಸೃಷ್ಟಿಯಾಗಿ ಕಡು ಕಷ್ಟ ಅನುಭವಿಸಿದವರಿಗೆ ನೆರವಾಗಲಿದೆ. ಹೀಗಾಗಿ ಖಾಸಗಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಬೇಕು ಎಂದರು.

ಅಲ್ಲದೆ ಸರ್ಕಾರ ಎಲ್ಲ ಉದ್ಯಮಗಳಿಗೆ ಅನುಕೂಲ ಮಾಡಿಕೊಟ್ಟಿದ್ದು, ಶ್ಯಾಮಿಯಾನ ಉದ್ಯಮಕ್ಕೆ ಯಾವುದೇ ಅನುಕೂಲ ಮಾಡಿಲ್ಲ. ಈ ಬಗ್ಗೆ ಹಲವಾರು ಬಾರಿ ಸರ್ಕಾರಕ್ಕೆ ಅನುಮತಿ ಮಾಡಿದರು ಸಹಿತ ಯಾವುದೇ ಸ್ಪಂದನೆ ದೊರೆತಿಲ್ಲ. ಹಾಗಾಗಿ ಸರ್ಕಾರ ಸಂಕಷ್ಟದಲ್ಲಿರುವ ಶ್ಯಾಮಿಯಾನ ಕೆಲಸಗಾರರಿಗೆ ಕಾರ್ಯಕ್ರಮ ನಡೆಸಲು ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ವಿಶಾಲ ವಾಘಮೋಡೆ, ಖಜಾಂಚಿ ಮುನ್ನಾ ಗುಡಗೇರಿ, ಸಂಘಟನಾ ಕಾರ್ಯದರ್ಶಿ ಇಮ್ರಾನ್ ಅಧೋನಿ, ಹುಬ್ಬಳ್ಳಿಯ ಅಧ್ಯಕ್ಷ ಗಂಗಾಧರ ಧುಬೆ, ಸದಸ್ಯರಾದ ಯೋಗಿ ಹಿರೇಮಠ, ಮಂಜುನಾಥ ಹುಲೆಪ್ಪನವರ, ಗುರು ಬೆಳವಡಿಮಠ ಸೇರಿದಂತೆ ಮುಂತಾದವರು ಇದ್ದರು.