ಶಾಮನೂರು ಹೇಳಿಕೆಗೆ ಯಶವಂತ್ ಖಂಡನೆ

ದಾವಣಗೆರೆ. ಏ.೫; ರಾಜಕಾರಣದಲ್ಲಿ ಸೋಲು ಗೆಲುವು ಎಂಬುದು ಸಹಜ ಅದಕ್ಕಾಗಿ ದುರಂಹಕಾರದ ಮಾತುಗಳನ್ನಾಡುವುದು ಸರಿಯಲ್ಲ ಎಂದು ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರು ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪನವರು ಪ್ರಚಾರ ಸಭೆಯನ್ನು ಉದ್ಘಾಟನೆ ಮಾಡಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಎದುರಾಳಿಯೇ ಇಲ್ಲ. ನನ್ನ ವಿರುದ್ಧ ನಾಲ್ಕುಬಾರಿ ಚುನಾವಣೆಯಲ್ಲಿ ಸೋತಿದ್ದಾರೆ, ಈಗ ನಿಂತರೆ ಮತ್ತೆ ಸೋಲಿಸುತ್ತೇನೆ ಎಂಬ ಅಹಂಕಾರದ ಮಾತನಾಡಿದ್ದಾರೆ. ಆದರೆ ಶಾಮನೂರು ಶಿವಶಂಕರಪ್ಪನವರು ವಯಸ್ಸಿನಲ್ಲಿ ತುಂಬಾ ಹಿರಿಯರು, ನನಗಿಂತ ರಾಜಕೀಯ ಅನುಭವ ಇದೆ ಆದರೆ ಅವರು ಮಾಧ್ಯಮದ ಮುಂದೆ ಆಡಿದ ಮಾತನ್ನು ನೋಡಿದಾಗ ಅವರಿಗೆ ರಾಜಕೀಯ ಅನುಭವ ಇಲ್ಲ ಎಂದರು. ಚುನಾವಣೆ ಎಂದರೆ ಸೋಲು-ಗೆಲುವು ಸಹಜ. ಈ ದೇಶದಲ್ಲಿ ಚುನಾವಣೆ ಬಂದಾಗ ಪ್ರತಿ ದೇಶದ ಮಹಾನ್ ನಾಯಕರು ಸೋಲು ಕಂಡಿದ್ದನ್ನು ನೋಡಿದ್ದೇವೆ, ನಿಮ್ಮ ಪಕ್ಷದ ಯುವರಾಜ ರಾಹುಲ್ ಗಾಂಧಿ ಸೋತು ವಯನಾಡಿಗೆ ಬಂದಿದ್ದನ್ನು ಜನ ನೋಡಿದ್ದಾರೆ ಅಷ್ಟೇ ಏಕೆ ನಿಮ್ಮ ಪಕ್ಷದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ತಮ್ಮ ಸ್ವಂತ ಕ್ಷೇತ್ರ ವರುಣಾದಲ್ಲಿ ಸೋತು ಬಾದಾಮಿಗೆ ಓಡಿ ಹೋಗಿರುವುದನ್ನು ನಾವು ನೋಡಿದ್ದೇವೆ. ಇಷ್ಟೆಲ್ಲ ಇರುವಾಗ ನನ್ನ ಚುನಾವಣೆಗೆ ಎದುರಾಳಿಗಳಿಲ್ಲ, ಯಾರು ನಿಂತರೂ ಸೋಲಿಸುತ್ತೇನೆ ಎಂಬ ಜಂಭದ ಮಾತು ಅಡುತ್ತಿರುವುದು ನೋಡಿದರೆ ಶಾಮನೂರು ಶಿವಶಂಕರಪ್ಪ ಅವರಿಗೆ ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆ. ಸೋಲಿನ ಭಯದಿಂದಲೇ ರಾತ್ರೋರಾತ್ರಿ ಸೀರೆ, ಕುಕ್ಕರ್, ದೋಸೆ ಹಂಚುಗಳನ್ನು ಜನಗಳಿಗೆ ಕೊಟ್ಟು ಆಮಿಷ ನೀಡಿದ್ದಾರೆ ಎಂದರು.
ಇಲ್ಲಿಯತನಕ ಯಾವ ಓಟಿನ ಮೇಲೆ ಚುನಾವಣೆ ಗೆಲುವು ಸಾಧಿಸುತ್ತ ಬಂದಿದ್ದೀರಿ, ಅವರಿಗೆ ಯಾವ ರೀತಿ ಮಂಕು ಬೂದಿ ಎರಚುತ್ತಿದ್ದೀರಿ ಎಂಬುವ ಸತ್ಯ ಈಗ ಅಲ್ಪಸಂಖ್ಯಾತ ಬಂಧುಗಳಿಗೆ ಅರ್ಥವಾಗಿದೆ. ಈ ಬಾರಿ ಬಿಜೆಪಿ ಯಿಂದ ಯಾರೇ ಅಭ್ಯರ್ಥಿಯಾದರೂ ಸಹ ಕಾಂಗ್ರೆಸ್ ಅಭ್ಯರ್ಥಿಗೆ ಸೋಲಿನ ರುಚಿಯನ್ನು ದಾವಣಗೆರೆ ದಕ್ಷಿಣ ಕ್ಷೇತ್ರ ಜನರು ಖಂಡಿತವಾಗಿ ನೀಡುತ್ತಾರೆ ಎಂದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ.ಪಕ್ಷ ಯಾರಿಗೇ ಟಿಕೇಟ್ ನೀಡಿದರೂ ಕಮಲ ಅರಳಿಸುವ ಚಾಲೆಂಜ್ ನಮ್ಮದು.ದಕ್ಷಿಣ ಕ್ಷೇತ್ರದಲ್ಲಿ ಮುಖಂಡರಾದ ಬಿ.ಜೆ ಅಜಯ್ ಕುಮಾರ್, ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್, ಯಶವಂತರಾವ್ ಜಾಧವ್, ಆನಂದಪ್ಪ ಆಕಾಂಕ್ಷಿ ಗಳಾಗಿದ್ದಾರೆ. ಪಕ್ಷಕ್ಕಾಗಿ ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸುವ ಪಣ ನಮ್ಮದು. ಬಿಜೆಪಿಯಲ್ಲಿ ಗೊಂದಲವಿಲ್ಲ ಜನರ ಮುಂದೆ ಬಿಜೆಪಿ ಸಾಧನೆಗಳನ್ನು ನೀಡುತ್ತೇವೆ ಜನರೇ ತೀರ್ಮಾನ ಮಾಡಲಿದ್ದಾರೆ.

  • ಯಶವಂತರಾವ್ ಜಾಧವ್