ಶಾಮನೂರು ಶಿವಶಂಕರಪ್ಪ ಉಚ್ಚಾಟಿಸುವಂತೆ ವಿಶ್ವನಾಥ್ ಮನವಿ

ಸಂಜೆವಾಣಿ ನ್ಯೂಸ್
ಮೈಸೂರು: ಜ.29:- ಕಾಂಗ್ರೆಸ್‍ನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರನ್ನು ಪಕ್ಷ ವಿರೋಧೀ ಹೇಳಿಕೆ ಕಾರಣ ಕೂಡಲೇ ಪಕ್ಷದಿಂದ ಉಚ್ಛಾಟಿಸಬೇಕೆಂದು ಎಂಎಲ್ಸಿ ಎಚ್. ವಿಶ್ವನಾಥ್ ಪಕ್ಷದ ವರಿಷ್ಠರಿಗೆ ಮನವಿ ಮಾಡಿದರು.
ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಹೋರಾಟ ಸಮಿತಿ ವತಿಯಿಂದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡುವ ವೇಳೆ, ಶಾಮನೂರು ಶಿವಶಂಕರಪ್ಪ ಅವರು ಕಾಂಗ್ರೆಸ್‍ನಿಂದಲೇ ಗೆದ್ದಿದ್ದಾರೆ. ಉದ್ದಕ್ಕೂ ಕಾಂಗ್ರೆಸ್‍ನಿಂದ ನೆರವು ಪಡೆದಿದ್ದಾರೆ. ಜಗತ್ತಿಗೆ ಇವರನ್ನು ತೋರಿಸಿದವರು ದಿವಂಗತ ದೇವರಾಜ ಅರಸ್ ಅವರು. ಅವರ ಆಶೀರ್ವಾದದಿಂದಲೇ ಬೆಳೆದರೂ ಪಕ್ಷ ಹಾಗೂ ಅರಸರ ಬಗ್ಗೆ ಇವರಿಗೆ ಕಿಂಚಿತ್ತೂ ಕೃತಜ್ಞತೆಯಿಲ್ಲ ಎಂದು ಬೇಸರಿಸಿದರು.
ಜೊತೆಗೆ, ಕಾಂಗ್ರೆಸ್ ಪಕ್ಷ ಜೀವಂತವಾಗಿದ್ದರೆ, ಡಿ.ಕೆ. ಶಿವಕುಮಾರ್ ಬಂಡೆ ಆಗಿದ್ದರೆ ಕೂಡಲೇ ಇವರನ್ನು ಪಕ್ಷದಿಂದ ಉಚ್ಛಾಟಿಸಬೇಕು. ಇವರು ಇಲ್ಲದಿದ್ದರೆ ಕಾಂಗ್ರೆಸ್ ನಡೆಯುವುದಿಲ್ಲವೇ, ವೀರಶೈವರಿಗೆ ಏನೂ ಅನುಕೂಲ ಆಗಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಆರೋಪಿಸುತ್ತಾರೆ. ಆದರೆ ಇವರಿಗೆ ಕೆಲವೇ ಮತ ವೀರಶೈವರಿಂದ ಬಿದ್ದಿವೆ. ಇವರಿಗೆ ಇತರರೇ ಹೆಚ್ಚು ಮತ ಹಾಕಿದ್ದಾರೆ. ಇವರ ಬಗ್ಗೆ ಏಕೆ ಶಾಮನೂರು ಶಿವಶಂಕರಪ್ಪ ಮಾತನಾಡುವುದಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
ಬಳಿಕ, ಕಾಂತರಾಜ ಆಯೋಗ ರಾಜ್ಯದ ಎಲ್ಲ ಜಾತಿ, ಭಾಷಿಕರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದೆ. ಇದನ್ನು ಸಿಎಂ ಸಿದ್ದರಾಮಯ್ಯ ಸ್ವೀಕರಿಸಬೇಕು. ವರದಿ ವಿರೋಧಿಸುವ ವಿರೋಧ ಪಕ್ಷದ ನಾಯಕ ಅಶೋಕ್ ಅವರಿಗೆ ತಿಳಿವಳಿಕೆಯೇ ಇಲ್ಲ. ಉನ್ನತ ಸಂಸ್ಥೆಗಳೇ ವರದಿ ವೈಜ್ಞಾನಿಕ ಎಂದಿವೆ. ಇನ್ನು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ವರದಿ ಓದಿಯೇ ಇಲ್ಲ. ಜನರಿಗೆ ಸರಿಯಾದ ಮಾಹಿತಿ ಸಿಗುವುದು ವರದಿ ಬಿಡುಗಡೆಯಾಗಿ ಚರ್ಚೆಗಳು ನಡೆದ ನಂತರ. ವಿರೋಧಿಸುವ ಸ್ವಾಮೀಜಿಗಳಿಗಂತೂ ಸಂವಿಧಾನದ ಅರಿವೇ ಇಲ್ಲ. ಹೀಗಾಗಿ ಏನೇ ವಿರೋಧವಿದ್ದರೂ ವರದಿ ಅಂಗೀಕರಿಸಬೇಕೆಂದು ಮನವಿ ಮಾಡಿದರು.
ಬಳಿಕ, ನಗರದ ನೂತನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಜಿ ಸಿಎಂ ದಿವಂಗತ ದೇವರಾಜ ಅರಸರ ಪ್ರತಿಮೆ ಸ್ಥಾಪನೆಗೆ ಸರ್ಕಾರ ಮುಂದಾಗಿ 92 ಲಕ್ಷ ಹಣ ಬಿಡುಗಡೆಗೊಳಿಸಿರುವುದು ಸ್ವಾಗತಾರ್ಹ. ದೇವರಾಜ ಅರಸು ಅವರು ತುರ್ತು ಪರಿಸ್ಥಿತಿಯನ್ನು ಸಮರ್ಪಕವಾಗಿ ಬಳಸಿಕೊಂಡು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇವರಿಗೂ ಸಹಾ ಕರ್ಪೂರಿ ಠಾಕೂರ್ ಅವರಂತೆಯೇ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ಘೋಷಿಸಬೇಕೆಂದು ಮನವಿ ಮಾಡಿದರು.
ಡಾ.ವೈ.ಡಿ. ರಾಜಣ್ಣ, ಎಂ. ಚಂದ್ರಶೇಖರ್, ಜಾಕೀರ್ ಹುಸೇನ್, ಡೈರಿ ವೆಂಕಟೇಶ್ ಹಾಜರಿದ್ದರು.