ಶಾಪಿಂಗ್ ಮಾಲ್‌ಗಳು ಪಾರ್ಕಿಂಗ್ ಶುಲ್ಕ ಸಂಗ್ರಹಿಸುವಂತಿಲ್ಲ

ತಿರುವನಂತಪುರಂ,ಜ.೧೫- ಶಾಪಿಂಗ್ ಮಾಲ್‌ಗಳಿಗೆ ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸುವ ಹಕ್ಕು ಇಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅರ್ಜಿದಾರ ಪೌಲಿ ವಡಕ್ಕನ್ ಎಂಬುವರು, ಶಾಪಿಂಗ್ ಮಾಲ್‌ಗಳು ಗ್ರಾಹಕರಿಗೆ ಉಚಿತವಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಶಾಪಿಂಗ್ ಮಾಲ್‌ಗಳು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು ಅವುಗಳ ಜವಾಬ್ದಾರಿಯಾಗಿದೆ. ಇದಕ್ಕಾಗಿ ಶುಲ್ಕ ವಸೂಲು ಮಾಡುವುದು ಕಾನೂನು ಬಾಹಿರ ಎಂದು ವಾದಿಸಿದ್ದರು ಇತ್ತೀಚೆಗೆ ಮಾಲ್ ಒಂದರಲ್ಲಿ ೨೦ ರೂ. ವಾಹನ ಪಾರ್ಕಿಂಗ್ ಶುಲ್ಕ ಸಂಗ್ರಹಿಸಿದ್ದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಕಟ್ಟಡ ನಿಯಮಾವಳಿಗಳ ಪ್ರಕಾರ ಪಾರ್ಕಿಂಗ್ ಸ್ಥಳವು ಕಟ್ಟಡದ ಭಾಗವಾಗಿದೆ. ಕಟ್ಟಡ ನಿರ್ಮಾಣಕ್ಕೆ ಅದು ಅಗತ್ಯ. ಕಟ್ಟಡ ಕಟ್ಟಿದ ನಂತರ ಮಾಲೀಕರು ಪಾರ್ಕಿಂಗ್ ಶುಲ್ಕ ಸಂಗ್ರಹಿಸಬಹುದೇ ಎಂಬುದು ಪ್ರಶ್ನೆ. ಮೇಲ್ನೋಟಕ್ಕೆ ಇದು ಸಾಧ್ಯವಿಲ್ಲ’ ಎಂದು ನ್ಯಾಯಾಲಯ ತಿಳಿಸಿದೆ.
ಕೇರಳ ಹೈಕೋರ್ಟ್‌ನ ಈ ಕ್ರಮದಿಂದಾಗಿ ಶಾಪಿಂಗ್ ಮಾಲ್ ಗ್ರಾಹಕರಿಗೆ ಪಾರ್ಕಿಂಗ್ ಶುಲ್ಕ ಹೊರಬೀಳುವುದು ತಪ್ಪಲಿದೆ. ಮುಂದಿನ ದಿನಗಳಲ್ಲಿ ಈ ವಿಷಯ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದು ಸದ್ಯಕ್ಕಿರುವ ಕುತೂಹಲದ ಸಂಗತಿಯಾಗಿದೆ.