ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ 29 :- ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಎಲ್ಲಾ ಧರ್ಮಿಯರು ಸಹೋದರತ್ವದಲ್ಲಿ ಸಹಬಾಳ್ವೆ ಜೀವನ ನಡೆಸುತ್ತಿದ್ದು ಮುಸ್ಲಿಂ ಬಾಂಧವರ ಬೇಡಿಕೆಯಂತೆ ಶಾದಿಮಹಲ್ ನಿರ್ಮಾಣಕ್ಕೆ ಮುಂದಾಗುವುದಾಗಿ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಭರವಸೆ ನುಡಿ ನೀಡಿದರು.
ಅವರು ಇಂದು ಕೂಡ್ಲಿಗಿ ಪಟ್ಟಣದ ಈದ್ಗಾ ಮೈದಾನದಲ್ಲಿ ಜರುಗಿದ ಬಕ್ರೀದ್ ಹಬ್ಬದ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡುತ್ತ ಭಾರತ ಎಲ್ಲಾ ಜಾತಿ ಧರ್ಮದಿಂದ ಕೂಡಿರುವ ಜಾತ್ಯತೀತ ರಾಷ್ಟ್ರವಾಗಿದೆ ಧರ್ಮ ಧರ್ಮಗಳ ನಡುವೆ ವಿಷದ ಬೀಜ ಬಿತ್ತುವ ರಾಜಕಾರಣ ಮಾಡದೆ ಸಹೋದರತ್ವ ಗುಣಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ತಿಳಿಸಿದಾಗ ಮಾತ್ರ ಜಾತ್ಯತೀತ ರಾಷ್ಟ್ರಕ್ಕೆ ನಾವು ಸಲ್ಲಿಸುವ ಗೌರವವಾಗುತ್ತದೆ ಎಂದರು ಹಾಗೂ ಕೂಡ್ಲಿಗಿ ಪಟ್ಟಣ ಸೇರಿದಂತೆ ಕ್ಷೇತ್ರದಲ್ಲಿ ಎಲ್ಲಾ ಧರ್ಮಿಯರು ಸಹೋದರತ್ವದಲ್ಲಿ ಸಹಬಾಳ್ವೆ ಜೀವನ ನಡೆಸಿಕೊಂಡು ಹೋಗುತ್ತಿರುವುದು ಅವರವರ ಹಬ್ಬದ ದಿನಗಳಲ್ಲಿ ಭಾಗವಹಿಸಿ ಎಲ್ಲರೂ ಶುಭಕೋರುವ ಪರಿಪಾಠ ಇರುವುದು ಸಂತಸ ತರುತ್ತದೆ ಎಂದರು.
ಮಾಜಿ ಸಚಿವ ಎನ್ ಎಂ ನಬೀ ಮಾತನಾಡಿ ಕೂಡ್ಲಿಗಿಯಲ್ಲಿ ಮುಸ್ಲಿಂ ಭಾಂದವರ ಮದುವೆ ಹಾಗೂ ಶುಭಕಾರ್ಯಗಳಿಗಾಗಿ ಕೂಡ್ಲಿಗಿ ಶಾಸಕರು ಅನುದಾನ ಬಳಸಿ ಶಾದಿಮಹಲ್ ನಿರ್ಮಾಣ ಮಾಡಿದರೆ ಅನುಕೂಲವಾಗಲಿದೆ ಎಂದು ಮುಸ್ಲಿಂ ಸಮುದಾಯದ ಪರವಾಗಿ ಶಾಸಕರಲ್ಲಿ ಬೇಡಿಕೆಯ ಮನವಿಯಿತ್ತರು.
ಕೂಡ್ಲಿಗಿ ಪಟ್ಟಣದಿಂದ ಕೊಟ್ಟೂರು ರಸ್ತೆಯಲ್ಲಿರುವ ಎರಡು ಈದ್ಗಾ ಗಳಿಗೆ ಬೆಳಿಗ್ಗೆ 7ಗಂಟೆಯಿಂದ ಸಾಮೂಹಿಕ ಪ್ರಾರ್ಥನೆಗೆ ತೆರಳಲು ಹೊರಟ ಮುಸ್ಲಿಂ ಭಾಂಧವರಿಗೆ ರಸ್ತೆಯಲ್ಲಿ ವಾಹನವನ್ನು ಕೆಲ ನಿಮಿಷ ನಿಷೇಧಿಸಿ ಅನುವು ಮಾಡಿಕೊಡಲಾಗಿತ್ತು. ಕಳೆದ ರಾತ್ರಿಯಿಂದಲೇ ಯಾವುದೇ ಅಹಿತಕರ ಘಟನೆ ಜರುಗದಂತೆ ಕೂಡ್ಲಿಗಿ ಕೊಟ್ಟೂರು ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿ ಕೂಡ್ಲಿಗಿ ಡಿವೈಎಸ್ಪಿ ನೇತೃತ್ವದಲ್ಲಿ ಸೂಕ್ತಬಂದೋಬಸ್ತ್ ಏರ್ಪಡಿಸಲಾಗಿತ್ತು ಸಿಪಿಐ ಹಾಗೂ ಆಯಾ ಠಾಣಾ ಪಿಎಸ್ಐಗಳು ಸಿಬ್ಬಂದಿಗಳೊಂದಿಗೆ ಮಸೀದಿ ಹಾಗೂ ಈದ್ಗಾ ಹತ್ತಿರ ಅಹಿತಕರ ಘಟನೆ ಜರುಗದಂತೆ ಬಂದೋಬಸ್ತ್ ಏರ್ಪಡಿಸಿದ್ದರು.
ಕೂಡ್ಲಿಗಿಯಲ್ಲಿ ಶಾಸಕ ಡಾ ಶ್ರೀನಿವಾಸ ಅವರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಸಿದ್ದರು ಈ ಸಂದರ್ಭದಲ್ಲಿ ಮಾಜಿ ಸಚಿವ ಎನ್ ಎಂ ನಬೀ ಪುತ್ರ ನಹೀಮ್, ಪಟ್ಟಣ ಪಂಚಾಯತಿ ಸದಸ್ಯ ಕಾವಲ್ಲಿ ಶಿವಪ್ಪ ನಾಯಕ, ಈಶಪ್ಪ, ಶುಕೂರ್, ಡಾಣಿ ರಾಘವೇಂದ್ರ, ಮತ್ತು ಕಾಂಗ್ರೆಸ್ ಮುಖಂಡರಾದ ಮಾದಿಹಳ್ಳಿ ನಜೀರ್, ರಹಿಮಾನ್, ಮಾಬು, ಕಡ್ಡಿ ಮಂಜುನಾಥ,ರಿಯಾಜ್, ಭಾಷಾಸಾಬ್, ಶಫಿವುಲ್ಲಾ, ಗ್ಯಾಸ್ ವೆಂಕಟೇಶ ಸೇರಿದಂತೆ ಇತರರಿದ್ದರು ಬಕ್ರೀದ್ ಹಬ್ಬದ ಶುಭಾಶಯವನ್ನು ಅಪ್ಪುಗೆ ಮೂಲಕ ವಿನಿಮಯದ ಶುಭ ಹಾರೈಸಿದರು.