ಶಾಖಾ ನಾಲೆ 2ನೇ ವಲಯಕ್ಕೆ ಬಾರದ ನೀರು; ರೈತರ ಪ್ರತಿಭಟನೆ

ಸಂಜೆವಾಣಿ ವಾರ್ತೆ

ದಾವಣಗೆರೆ, ಫೆ.22; ಭದ್ರಾ ಜಲಾಶಯದಿಂದ ನೀರು ಹರಿಸಿ ನಾಲ್ಕೈದು ದಿನವಾದರೂ ದಾವಣಗೆರೆ ಶಾಖಾ ನಾಲೆ 2ನೇ ವಲಯಕ್ಕೆ ಒಂದೇ ಒಂದು ಹನಿ ನೀರು ಸಹ ಬಂದಿಲ್ಲವೆಂದು ಆರೋಪಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರೈತ ಒಕ್ಕೂಟದನೇತೃತ್ವದಲ್ಲಿ ತಾಲೂಕಿನ ಕುಕ್ಕವಾಡ ಬಳಿ ಒಣಗಿ ನಿಂತಿರುವ ಭದ್ರಾ ನಾಲೆಗಿಳಿದು ರೈತರು ಪ್ರತಿಭಟಿಸಿದರು. ತಾಲೂಕಿನ ಕುಕ್ಕವಾಡದ ಬಳಿ ಶಾಖಾ ನಾಲೆ 2ನೇ ವಲಯದಲ್ಲಿ ನಾಲೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ತೇಜಸ್ವಿ ವಿ.ಪಟೇಲ್ ಇತರರ ನೇತೃತ್ವದಲ್ಲಿ ಒಂದು ಹನಿಯೂ ನೀರಿಲ್ಲದೇ ಒಣಗಿದ್ದ ಭದ್ರಾ ನಾಲೆಗೆ ಇಳಿದ ರೈತರು ಸಮರ್ಪಕವಾಗಿ ನಾಲೆಗೆ ನೀರು ಹರಿಸುವಂತೆ ತ್ತಾಯಿಸಿ ಘೋಷಣೆ ಕೂಗುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.ಇದೇ ವೇಳೆ ಮಾತನಾಡಿದ ಸಂಘದ ರಾಜ್ಯ ಅಧ್ಯಕ್ಷ ತೇಜಸ್ವಿ ವಿ.ಪಟೇಲ್, ಭದ್ರಾ ಅಣೆಕಟ್ಟೆಯಿಂದ ಕಳೆದ ಬಾರಿ ಬಿಟ್ಟಿದ್ದ ನೀರೇ ತಲುಪಿರಲಿಲ್ಲ. ಈಗ ನಾಲ್ಕೈದು ದಿನಗಳ ಹಿಂದೆ ನಾಲೆಗಳಿಗೆ ನೀರು ಬಿಟ್ಟಿದ್ದರೂ ಇನ್ನೂ ಒಂದೇ ಒಂದು ಹನಿ ನೀರು ಸಹ ನಮ್ಮ ಭಾಗಕ್ಕೆ ತಲುಪಿಲ್ಲ. ಹೀಗಾದರೆ ಅಚ್ಚುಕಟ್ಟು ಪ್ರದೇಶದ ರೈತರು ಏನು ಮಾಡಬೇಕು? ದಾವಣಗೆರೆ ಶಾಖಾ ನಾಲೆ 2ನೇ ವಲಯಕ್ಕೆ ನೀರು ಬಂದಿಲ್ಲ. ಹೀಗಾದರೆ ಅಚ್ಚುಕಟ್ಟು ಕೊನೆಯ ಭಾಗಕ್ಕೆ ನೀರು ತಲುಪುವುದಾದರೂ ಹೇಗೆ ಎಂದು ಪ್ರಶ್ನಿಸಿದರು.ದಿನದಿನಕ್ಕೂ ಬೆಳೆಗಳು ಒಣಗುತ್ತಿರುವುದು ರೈತರನ್ನು ಮತ್ತಷ್ಟು ಆತಂಕಕ್ಕೆ ನೂಕುತ್ತಿದೆ. ನೀರಾವರಿ ಇಲಾಖೆ, ಜಿಲ್ಲಾಡಳಿತಗಳು ರೈತರ ತಾಳ್ಮೆಯನ್ನು ಮತ್ತಷ್ಟು ಪರೀಕ್ಷಿಸಬಾರದು. ಮಕ್ಕಳಿಗಿಂತಲೂ ಹೆಚ್ಚಾಗಿ ತೋಟಗಳನ್ನು ರೈತರುನೋಡಿಕೊಂಡು ಬಂದಿದ್ದಾರೆ. ಸಾಲ ಮಾಡಿ, ಕೊ‍ಳವೆ ಬಾವಿ ಕೊರೆಸಿದರೂ ಒಂದು ಹನಿ ನೀರು ಸಿಗುತ್ತಿಲ್ಲ. ಈ ಹಿಂದೆ ನೀರು ನೀಡುತ್ತಿದ್ದ ಕೊಳವೆ ಬಾವಿಗಳು ಅಂತರ್ಜಲ ಖಾಲಿಯಾಗಿ ಬರಿದಾಗುತ್ತಿಗೆವ. ಭದ್ರಾ ನಾಲೆಗೆ ನೀರು ಹರಿದರಷ್ಟೇ ರೈತರ ಈ ಎಲ್ಲಾ ಸಮಸ್ಯೆಗಳು ಒಂದಿಷ್ಟು ಕೊನೆಗಾಣಬಹುದು ಎಂದು ಅವರು ಹೇಳಿದರು.ನೀರಿನ ಸಮಸ್ಯೆಯೆಂಬುದು ಇದ್ದಕ್ಕಿದ್ದಂತೆಯೇ ಸೃಷ್ಟಿಯಾಗುವಂತಹದ್ದಲ್ಲ. ಭದ್ರಾ ಅಣೆಕಟ್ಟೆಯ ನೀರು ಸಂಗ್ರಹ ಅವಲಂಬಿಸಿ, ಲೆಕ್ಕಾಚಾರ ಮಾಡಿಯೇ ಮಳೆಗಾಲ ಮತ್ತು ಬೇಸಿಗೆ ಕಾಲದ ನೀರಾವರಿ ವೇಳಾಪಟ್ಟಿಯನ್ನು ನಿಗದಿಪಡಿಸಬೇಕಾಗುತ್ತದೆ. ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರಾವರಿ ಇಲಾಖೆಯ ಇಂಜಿನಿಯರ್‌ಗಳು ಮೌನವಹಿಸಿದ್ದರಿಂದಲೇ ಇಂದು ಅಚ್ಚುಕಟ್ಟು ರೈತರು ಸಂಕಷ್ಟ ಎದುರಿಸುವಂತಾಗಿದೆ. ಭದ್ರಾ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿದರು.ಸಂಘದ ಉಪಾಧ್ಯಕ್ಷ ಕೆ.ಎನ್.ಮಂಜುನಾಥ, ಷಣ್ಮುಖ ಸ್ವಾಮಿ, ರೈತ ಒಕ್ಕೂಟದ ಬಿ.ಎಂ.ಸತೀಶ ಕೊಳೇನಹಳ್ಳಿ, ವಕೀಲ ಮತ್ತಿ ಹನುಮಂತಪ್ಪ, ದಿಳ್ಯಪ್ಪ ಮುದಹದಡಿ, ಡಿ.ಮಲ್ಲೇಶಪ್ಪ, ಮಹೇಶ್ವರಪ್ಪ, ಗೋಪಾಲ, ಕಲ್ಲೇಶಪ್ಪ, ಅರವಿಂದ, ದಿನೇಶ, ನಿರಂಜನಮೂರ್ತಿ, ಸಿರಿಗೆರೆ ಪ್ರಭು, ಕಿರಣ, ಹರೀಶ, ಜಿ.ಸಿ.ಮಂಜುನಾಥ, ಗಂಗಾಧರ ಇತರರು ಇದ್ದರು.