
ವೈವಿಧ್ಯಮಯ ಧಾರಾವಾಹಿಗಳಲ್ಲಿ ಸಹಜತೆ, ಕೌತುಕಗಳ ಜೊತೆ ಸೃಜನಾತ್ಮಕ ವಿಷಯಗಳಿಂದ ವೀಕ್ಷಕರಿಗೆ ರಸದೌತಣ ನೀಡುತ್ತಿರುವ ” ಉದಯ ಟಿವಿ ಇದೀಗ ” ಶಾಂಭವಿ” ಅವರನ್ನು ಮನೆ ಮನೆಗೆ ಕರೆ ತರಲು ಸಜ್ಜಾಗಿದೆ.
ʻಸಿಂಪಲ್ ಆಗಿ ಒಂದು ಲವ್ ಸ್ಟೋರಿʼ ಖ್ಯಾತಿಯ ಸಿಂಪಲ್ ಸುನಿ ಮೊಟ್ಟಮೊದಲ ಬಾರಿಗೆ ಟಿವಿ ಧಾರಾವಾಹಿ ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ ಎನ್ನುವುದು ವಿಶೇಷ.
ಶಾಂಭವಿ ಮುದ್ದಾದ ಆರು ವರ್ಷದ ಮಗು. ಇವಳ ಅಮ್ಮ ಶಿವಗಾಮಿ ಸಾವಿರಾರು ಕೋಟಿ ಆಸ್ತಿಯ ಒಡತಿ. ಶ್ರೀ ಶಾಂಭವಿ ಶಿಕ್ಷಣ ಸಂಸ್ಥೆ ಜೊತೆ ಇನ್ನೂ ಹಲವು ಉದ್ಯಮಗಳಿವೆ. ಇವಳಿಗೊಬ್ಬ ಅಣ್ಣ ಹರಿಪ್ರಸಾದ್. ಅಣ್ಣತಂಗಿಗೆ ಅವರಿಬ್ಬರೇ ಪ್ರಪಂಚ. ನಾಯಕ ಅಶೋಕ ಸಂಸ್ಥೆಯಲ್ಲಿ ಶಿಕ್ಷಕನಾಗಿ ಸೇರುವುದರೊಂದಿಗೆ ಕಥೆ ತಿರುವು ಪಡೆದುಕೊಳ್ಳುತ್ತದೆ.
ಅಶೋಕನ ಮನೆಯವರು ದುಡ್ಡಿಗಾಗಿ ಹಪಹಪಿಸುವ ಮಂದಿ. ಅವನ ಅಮ್ಮ ಮತ್ತು ತಮ್ಮಂದಿರು ತುಂಬಾ ಖತರ್ನಾಕ್. ಎಂತೆಂಥ ಸಂಬಂಧ ಬಂದರೂ ಮದುವೆಗೆ ಒಪ್ಪದಿದ್ದ ಶಿವಗಾಮಿ ಮಧ್ಯಮ ವರ್ಗದ ಅಶೋಕ್ ಪ್ರೀತಿಯಲ್ಲಿ ಬೀಳುತ್ತಾಳೆ. ಅವನ ಹಿಂದಿನ ಷಡ್ಯಂತ್ರದ ಬಲೆಯಲ್ಲಿ ಸಿಲುಕಿಕೊಳ್ಳುತ್ತಾಳೆ. ಮದುವೆಯೂ ಆಗುತ್ತದೆ. ಅವರಿಗೆ ಹುಟ್ಟಿದ ಮಗುವೇ ಶಾಂಭವಿ. ಮುಂದೆ ಒಂದು ದಿನ ಶಾಂಭವಿ ಕಾಣೆಯಾಗುತ್ತಾಳೆ. ಶಿವಗಾಮಿ ಹುಚ್ಚಿಯಾಗುತ್ತಾಳೆ.ಅದೇ ಸಮಯಕ್ಕೆ ಒಂದು ದೇವಿಯ ಪ್ರತಿಷ್ಠಾಪೆ ಆಗುತ್ತದೆ. ಕಾಣೆಯಾದ ಶಾಂಭವಿಗೂ ಈ ದೇವಿ ಇರುವ ಜಾಗಕ್ಕೂ ಸಂಬಂಧವಿದೆ.ಅದು ಏನು ಎನ್ನುವುದು ತಿರುಳು.
ಮನು ಛಾಯಾಗ್ರಹಣವಿದೆ.ಶಾಂಭವಿಯ ಪಾತ್ರವನ್ನು ಬೇಬಿ ರಚನಾ ಟಿ.ಬಿ ನೀರ್ವಹಿಸುತ್ತಿದ್ದಾರೆ; ಪ್ರಮುಖ ಪಾತ್ರದಲ್ಲಿ ಐಶ್ವರ್ಯ ಸಿಂಧೋಗಿ, ಹರೀಶ್ ಟಿವಿ, ವಿನಯ ಗೌಡ, ಅಂಬುಜಾಕ್ಷಿ ನಟಿಸಿದರೆ ಪೂಜಿತಾ, ಡಾಲಿ ರಾಜೇಶ್, ಸೂರ್ಯ ಕುಂದಾಪುರ, ರೋಹಿತ್ ನಾಯರ್ ,ಶ್ಯಾಮಲಮ್ಮ ಮುಂತಾದವರ ಸಹತಾರಾಗಣವಿದೆ.
ವಿಭಿನ್ನ ಕಥೆ
ಪುಟ್ಟ ಹುಡುಗಿಯಾಗಿ ಬಂದು ದೆವ್ವವಾಗಿ ದುಷ್ಟರನ್ನು ಶಿಕ್ಷಿಸುವ, ದೇವತೆಯಾಗಿ ಶಿಷ್ಟರನ್ನು ರಕ್ಷಿಸುವ ʻಶಾಂಭವಿʻ ಇದೇ 11 ರಿಂದ ಸೋಮವಾರದಿಂದ ಶನಿವಾರದವರಗೆ ರಾತ್ರಿ 7.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.