ಶಾಂಪೇನ್ ಬಾಟಲ್‌ಗಳಲ್ಲಿ ಮಾದಕವಸ್ತು 2.5 ಕೋಟಿ ಮೌಲ್ಯದ ಡ್ರಗ್ಸ್ ವಶ


ಬೆಂಗಳೂರು,ಸೆ.೨೪- ಮಾದಕವಸ್ತು ಮಾರಾಟ ಸರಬರಾಜು ವಿರುದ್ಧ ಸಮರ ಸಾರಿರುವ ಪೂರ್ವ ವಿಭಾಗದ ಪೊಲೀಸರು ಐವರಿಯನ್ ಕೋಸ್ಟ್ ದೇಶದ ಡ್ರಗ್ ಫೆಡ್ಲರ್‌ನ್ನು ಭರ್ಜರಿ ಬೇಟೆಯಾಡಿ ಬಂಧಿಸಿ ಶಾಂಪೆನ್ ಬಾಟಲ್‌ನಲ್ಲಿ ಸಾಗಿಸುತ್ತಿದ್ದ ೨.೫ ಕೋಟಿ ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.
ಐವರಿಯನ್ ಕೋಸ್ಟ್ ದೇಶದ ದೋಸೊ ಖಾಲಿಫಾ (೨೮) ಬಂಧಿತ ಡ್ರಗ್ ಫೆಡ್ಲರ್ ಆಗಿದ್ದು, ಆತನಿಂದ ೨.೫ ಕೋಟಿ ರೂ. ಮೌಲ್ಯದ ಎರಡೂವರೆ ಕೆಜಿ ಎಂಡಿಎಂಎ ಕ್ರಿಸ್ಟಲ್ ಪೌಡರ್, ಮೊಬೈಲ್ ಹಾಗೂ ಸ್ಕೂಟರ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ. ಶರಣಪ್ಪ ಅವರು ತಿಳಿಸಿದ್ದಾರೆ.
ಆರೋಪಿಯು ಪ್ರವಾಸ ವೀಸಾದಡಿ ಭಾರತಕ್ಕೆ ಬಂದು ನೆಲೆಸಿದ್ದು, ಆತನ ಬಳಿ ಯಾವುದೇ ಅಧಿಕೃತ ಪಾಸ್‌ಪೋರ್ಟ್, ವೀಸಾ ದೊರೆತಿಲ್ಲ.ಅದರಿಂದಾಗಿ ಆತನ ವಿರುದ್ಧವಿದೇಶಿ ಕಾಯ್ದೆಯಡಿಯೂ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಆರೋಪಿಯು ಶಾಂಪೆನ್ ಬಾಟಲ್‌ಗಳಲ್ಲಿ ಗೋವಾದಿಂದ ಎಂಡಿಎಂಎ ಕ್ರಿಸ್ಟಲ್ ಇನ್ನಿತರ ದುಬಾರಿ ಡ್ರಗ್ಸ್‌ಗಳನ್ನು ಸಾಗಿಸಿಕೊಂಡು ಬಂದು ನಗರದ ಪ್ರತಿಷ್ಠಿತ ಹೋಟೆಲ್‌ಗಳು, ವಿದ್ಯಾರ್ಥಿಗಳು, ಉದ್ಯಮಿಗಳು, ಶ್ರೀಮಂತರುಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದರು.
ಆರೋಪಿಯು ಗೋವಾದಲ್ಲಿ ಎಲ್ಲಿ ಮತ್ತು ಹೇಗೆ ಖರೀದಿಸುತ್ತಿದ್ದ ಎಂಬ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಆರೋಪಿಯ ಎಫ್‌ಆರ್‌ಆರ್ ಅವರಿಗೂ ಮಾಹಿತಿ ಕೋರಲಾಗಿದೆ ಎಂದು ತಿಳಿಸಿದರು.
ಆರೋಪಿಯು ಹೆಚ್‌ಬಿಆರ್ ಲೇಔಟ್‌ನ ಯೂಸೂಫ್ ಮಸೀದಿ ಬಳಿ ಶಾಂಪೇನ್ ಬಾಟಲುಗಳಲ್ಲಿದ್ದ ಡ್ರಗ್ಸ್‌ನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ಕೈಗೊಂಡ ಗೋವಿಂದಪುರ ಇನ್ಸ್‌ಪೆಕ್ಟರ್ ಪ್ರಕಾಶ್ ಮತ್ತವರ ಸಿಬ್ಬಂದಿ ಆರೋಪಿಗೆ ಎಡೆಮುರಿ ಕಟ್ಟುವಲ್ಲಿ ಯಶಸ್ವಿ
ಯಾಗಿದೆ.
ಆರೋಪಿ ಪಾಸ್‌ಪೋಟ್, ವೀಸಾ ಪರಿಶೀಲಿಸದೆ ಗೋವಿಂದಪುರದ ಮನೆಯನ್ನು ಬಾಡಿಗೆಗೆ ಮನೆ ನೀಡಿದ ಮಾಲೀಕನಿಗೆ ನೋಟಿಸ್ ನೀಡಿ ಕರೆಸಿಕೊಂಡು ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಸಿಬ್ಬಂದಿಯನ್ನು ಅಭಿನಂದಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಹಾಗೂ ಹೆಚ್ಚುವರಿ ಆಯುಕ್ತ ಮುರುಗನ್ ಅವರು ನಗದು ಬಹುಮಾನ ಘೋಷಿಸಿದ್ದಾರೆ ಎಂದು ಶರಣಪ್ಪ ತಿಳಿಸಿದರು.