ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ ಗುರುವಂದನೆ ಕಾರ್ಯಕ್ರಮ

ತಿ.ನರಸೀಪುರ.ಜು.29:- ಮಾಡ್ರಹಳ್ಳಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳು ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ತೆರದು ಬಡ ಮಕ್ಕಳಿಗೆ ಶಿಕ್ಷಣದ ದಾಸೋಹ ನೀಡುವ ಮೂಲಕ ನಿರಂತರ ಕಾಯಕದಲ್ಲಿ ತೊಡಗಿಕೊಂಡಿರುವುದು ತಾಲೂಕಿಗೆ ಹೆಮ್ಮೆ ತರುವ ಸಂಗತಿಯಾಗಿದೆ ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ಹೇಳಿದರು.
ಪಟ್ಟಣದ ಶ್ರೀಗುರು ಚನ್ನಮಲ್ಲಿಕಾರ್ಜುನ ವಿದ್ಯಾ ಸಂಸ್ಥೆ ಆವರಣದಲ್ಲಿ ನಡೆದ ಮಾಡ್ರಹಳ್ಳಿ ಪಟ್ಟದ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಗಳವರ ಗುರುವಂದನೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸ್ವಾಮೀಜಿಗಳು ತಮ್ಮ ಜೀವನದಲ್ಲಿ ಅತಿ ಸರಳವಾದ ನಡವಳಿಕೆ ಅಳವಡಿಸಿಕೊಳ್ಳುವ ಮೂಲಕ ತಾಲೂಕಿಗೆ ಮಾದರಿಯಾಗಿದ್ದಾರೆ.ನಾನು ರಾಜಕೀಯ ಕ್ಷೇತ್ರಕ್ಕೆ ಬಂದಾಗಿನಿಂದಲೂ ಸ್ವಾಮೀಜಿಗಳೊಂದಿಗೆ ಒಡನಾಟ ಇಟ್ಟುಕೊಂಡಿದ್ದು ಅವರ ಸರಳತೆ,ಪ್ರಾಮಾಣಿಕತೆ ಹಾಗು ನಿತ್ಯದ ಕಾಯಕ ಗಮನಾರ್ಹ ಸಂಗತಿಯನ್ನು ಗಮನಿಸಿದ್ದೇನೆ.ತಮ್ಮ 70 ನೇ ವರ್ಷದಲ್ಲಿಯೂ ಶಿಕ್ಷಣ ಸಂಸ್ಥೆ ನಡೆಸಲು ಅವರು ಪಡುತ್ತಿರುವ ಪರಿಶ್ರಮ ಶ್ಲಾಘನೀಯ ಎಂದರು.
ಬಡ ಮಕ್ಕಳು,ದೀನ ದಲಿತರ ಪರವಾಗಿ ಕೆಲಸ ಮಾಡುತ್ತಿರುವ ತಾಲೂಕಿನ ಮಠಗಳಲ್ಲಿ ಮಾಡ್ರಹಳ್ಳಿ ಮಠ ಮುಂಚೂಣಿಯಲ್ಲಿದೆ.ಎಲ್ಲ ವರ್ಗದ ಮಕ್ಕಳಿಗೆ ಶಿಕ್ಷಣ ಕೊಡುವ ಮಹತ್ತರವಾದ ಕೆಲಸವನ್ನು ಸ್ವಾಮೀಜಿಗಳು ಮಾಡುತ್ತಿದ್ದು,ಅವರ ಆರೋಗ್ಯ ಉತ್ತಮವಾಗಿರಲಿ,ಅವರಿಗೆ ಮತ್ತಷ್ಟು ಕಾಯಕ ಮಾಡಲು ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ರೂವಾರಿಗಳಾದ ಎಂ. ಎಲ್.ಹುಂಡಿ ಮಠದ ಗೌರಿ ಶಂಕರ ಸ್ವಾ ಮೀಜಿ ಮಾತನಾಡಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳು ಸರ್ಕಾರದ ಅನುದಾನವಿಲ್ಲದೇ ತಮ್ಮ ಸ್ವಂತ ಹಣದಲ್ಲಿ ಶಿಕ್ಷಣ ಸಂಸ್ಥೆ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ.ಸರ್ಕಾರದ ಸಹಾಯದನ ಇಲ್ಲದೇ ಒಂದು ಸಂಸ್ಥೆ ನಡೆಸುವುದು ಸುಲಭದ ಮಾತಲ್ಲ.ತಮ್ಮ ಇಳಿ ವಯಸ್ಸಿನಲ್ಲೂ ಸ್ವಾಮೀಜಿಗಳು ತಮ್ಮದೇ ಜಮೀನಿನಲ್ಲಿ ವ್ಯವಸಾಯ ಮಾಡಿ ಅಲ್ಲಿ ಬಂದ ಹಣದಿಂದ ಸಂಸ್ಥೆ ನಡೆಸುತ್ತಿದ್ದಾರೆ ಎಂದರು.