ಶಾಂತಿ ಸೌಹಾರ್ದತೆಯ ಪ್ರೇಮಭಾವ ಬೆಳೆಸೋಣ : ರವೀಂದ್ರ ಸ್ವಾಮಿ

ಔರಾದ: ಎ.14:ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಔರಾದ ತಾಲೂಕಿನ ಬೆಳಕುಣಿ ಚೌಧರಿ ಗ್ರಾಮದಲ್ಲಿ ಇಸ್ಲಾಂ ಬಾಂಧವರು ಏರ್ಪಡಿಸಿದ ಇಫ್ತೆಹಾರ್ ಕೂಟದಲ್ಲಿ ಏಕತಾ ಫೌಂಡೇಶನ್ ಪ್ರಮುಖರಾದ ಶ್ರೀ ರವೀಂದ್ರ ಸ್ವಾಮಿ ಭಾಗವಹಿಸಿದ್ದರು. ಪ್ರಿತಿಯಿಂದ ಇಸ್ಲಾಂ ಬಾಂಧವರು ನೀಡಿದ ಉಪಹಾರ ಕೂಟದಲ್ಲಿ ಪಾಲ್ಗೊಂಡು ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವದ ಸಂದೇಶವನ್ನು ಸಾರಲು ಇಂದು ನಾನು ಇಲ್ಲಿ ಭಾಗವಹಿಸಿದ್ದೇನೆ. ತಾಲೂಕಿನಲ್ಲಿ ಅನ್ಯಾಯವಾದಾಗ ಯುವಕರು ಅದನ್ನು ಧೈರ್ಯದಿಂದ ಖಂಡಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಭಾತೃತ್ವವನ್ನು ಸಾರುವುದೇ ನನ್ನ ಪ್ರಮುಖ ಧ್ಯೇಯವಾಗಿದೆ. ಮುಂಬರುವ ದಿನಗಳಲ್ಲಿ ನಾವೆಲ್ಲರೂ ಜಾತಿ ವರ್ಣ ವರ್ಗರಹಿತವಾಗಿ ತಾಲೂಕಿನ ಅಭಿವೃದ್ಧಿಗಾಗಿ ದುಡಿಯೋಣ ಎಂದು ತಿಳಿಸಿದರು. ಇದೇ ವೇಳೆ ರವೀಂದ್ರ ಸ್ವಾಮಿಯವರು ಇಸ್ಲಾಂ ಧರ್ಮದ ಟೋಪಿಯನ್ನು ಧರಿಸಿ ಸೌಹಾರ್ದತೆಯ ಸಾರಾಂಶವನ್ನು ಪಸರಿಸಿದರು. ಅಲ್ಲದೇ ಮುಸ್ಲಿಂ ಧರ್ಮದ ಪುಟ್ಟ ಪುಟ್ಟ ಮಕ್ಕಳಿಗೆ ಸಿಹಿ ತಿನ್ನಿಸಿ ಪ್ರೀತಿಯ ಸಸಿಯನ್ನು ನೆಟ್ಟರು. ಸರ್ವ ಗ್ರಾಮಸ್ಥರ ಹೃದಯದಲ್ಲಿ ಸಮಾನತೆಯ ಸಂದೇಶ ಸಾರಿದರು. ಇದೇ ಸಂದರ್ಭದಲ್ಲಿ ಪ್ರಮುಖರಾದ ಬಾಬು ಖುರೇಷಿ, ಮಾದಪ್ಪ ಪಿಟ್ರೆ, ಧನರಾಜ ಮಾನಕಾರಿ, ಖದೀರ ಖುರೇಷಿ, ಆರಿಫ್ ಖುರೇಷಿ, ಮಸ್ತಾನ್ ಚೌಧರಿ, ಸುರೇಶ ಮುಗಟೆ, ಸಮಿ ಅಹ್ಮದ್, ಮುಸ್ತಫಾ ಖುರೇಷಿ, ನಾಮದೇವ ಗುರ್ಜಿ, ಡಾ. ಫಾರೂಖ್, ಕಲೀಮ್ ಸೌದಾಗರ, ನಾಮದೇವ ಭಂಡಾರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.