ಶಾಂತಿ, ಸೌಹಾರ್ದತೆಯಿಂದ ಬಕ್ರೀದ್ ಆಚರಿಸಿ : ಡಿಸಿ ಜಾನಕಿ

ಬಾಗಲಕೋಟೆ,ಜೂ.27 : ಜಿಲ್ಲೆಯಾದ್ಯಂತ ಜೂನ್ 29 ರಂದು ಆಚರಿಸಲ್ಪಡುವ ಬ್ರಕ್ರೀದ್ ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಕರೆ ನೀಡಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಬಕ್ರಿದ್ ಹಬ್ಬ ಆಚರಿಸುವ ಕುರಿತುಂತೆ ಜರುಗಿದ ಶಾಂತತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಾಂತಿಗೆ ಪ್ರತೀಕವಾಗಿರುವ ಈ ಬಕ್ರೀದ್ ಹಬ್ಬದ ಆಚರಣೆಯಲ್ಲಿ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಶಾಂತಿ ಕದಡದಂತೆ ನೋಡಿಕೊಂಡು ಸಂಭ್ರಮದಿಂದ ಹಬ್ಬವನ್ನು ಆಚರಿಸಲು ಮುಂದಾಗಬೇಕು. ಹಬ್ಬದ ಸಂಭ್ರದ ಆಚರಣೆಗೆ ಜಿಲ್ಲಾಡಳಿತದ ಜೊತೆ ತಾವುಗಳು ಕೈಜೋಡಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಮಾತನಾಡಿ ಕಾನೂನಿಗೆ ಧಕ್ಕೆ ಬರದಂತೆ ಹಬ್ಬವನ್ನು ಆಚರಿಸಬೇಕು. ಸರಕಾರ ಕೆಲವೊಂದಿ ಪ್ರಾಣಿಗಳ ವಧೆಯನ್ನು ನಿಷೇಧಿಸಿದ್ದು, ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅಂತಹ ಪ್ರಾಣಿಗಳ ವಧೆಯಾಗುವ ಮತ್ತು ಅಕ್ರಮ ಸಾಗಾಣಿಕೆಯಾಗುವ ಸಾಧ್ಯತೆ ಇದೆ. ಅವುಗಳನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಚೆಕ್‍ಪೋಸ್ಟಗಳನ್ನು ಸ್ಥಾಪಿಸಲಾಗಿದೆ. ಸಿಸಿ.ಟಿವಿ ಕೂಡಾ ಸಹ ಹಾಕಲಾಗಿದೆ. ಕಾನೂನಿನ ವಿರುದ್ದ ನಡೆದಲ್ಲಿ ನಿರ್ಧಾಕ್ಷಣ್ಯವಾಗಿ ಕ್ರಮಜರುಗಿಸಲಾಗುತ್ತಿದೆ. ಮಾಂಸದ ಅಂಗಡಿಗಳನ್ನು ಸಹ ಚಕ್ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಶಶಿಧರ ನಾಡಗೌಡರ ಮಾತನಾಡಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯು ಜಾರಿಯಾಗಿರುವ ಹಿನ್ನಲೆಯಲ್ಲಿ ಅನಧೀಕೃತವಾಗಿ ಆಕಳು, ಕರು, ಎತ್ತು, ಒಂಟೆ ಅಕ್ರಮವಾಗಿ ಸಾಗಾಣಿಕೆ ಮತ್ತು ವಧೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರಾಣಿಗಳ ವಧೆ ಕಾನೂನಿನ ಚೌಕಟ್ಟಿನಲ್ಲಿ ನಡೆಯಬೇಕು. ಯಾವುದೇ ಪ್ರಾಣಿಗಳನ್ನು ವಧೆ ಮಾಡುವಲ್ಲಿ ಸ್ಥಳದ ಮಾಹಿತಿ ಹಾಗೂ ಅನುಮತಿಯನ್ನು ಪಡೆದು ಸೌಹಾರ್ದತಯಿಂದ ಹಬ್ಬವನ್ನು ಆಚರಿಸಲು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ನಗರಸಭೆ ಪೌರಾಯುಕ್ತ ವಾಸಣ್ಣ ಆರ್ ಸೇರಿದಂತೆ ಇತರೆ ಅಧಿಕಾರಿಗಳು ವಿವಿಧ ಸಮುದಾಯದ ಮುಖಂಡರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಡಿವಾಯ್‍ಎಸ್ಪಿ ಪ್ರಶಾಂತ ಮನೊಳ್ಳಿ ಸ್ವಾಗತಿಸಿ ಹಬ್ಬದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಕೊನೆಗೆ ವಂದಿಸಿದರು.