
ಬೆಂಗಳೂರು,ಅ.೨- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ವಿಫಲವಾಗಿದೆ ಎಂದು ದೂರಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿವಮೊಗ್ಗ ಗಲಭೆಗೂ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೂ ಸಂಬಂಧವಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.ಶಿವಮೊಗ್ಗ ಪ್ರಕ್ಷುಬ್ಧ ವಾತಾವರಣ ಇರುವ ನಗರ. ಅಲ್ಲಿ ಹಿಂದೆ ಹಲವಾರು ಘಟನೆ ನಡೆದಿದೆ. ಈದ್ ಮಿಲಾದ್‌ನಂಥ ಮೆರವಣಿಗೆ ನಡೆದಾಗ ಪೊಲೀಸರು ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.ಶಿವಮೊಗ್ಗದ ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇಂಥ ಘಟನೆ ನಡೆಯುತ್ತದೆ. ಇಂಥಹ ಠಾಣೆಗಳಿಗೆ ವರ್ಗಾವಣೆ ಮಾಡುವಾಗ ಸಮರ್ಥ ಅಧಿಕಾರಿ ಹಾಕಬೇಕು. ಸ್ವಹಿತಾಸಕ್ತಿಗಳಿಗೆ ಬಲಿಯಾಗಿ ಅಧಿಕಾರಿಗಳ ವರ್ಗಾವಣೆ ಮಾಡಿದರೆ, ಅವರು ಕಾನೂನು ಕಾಪಾಡುವ ಬದಲು ಬೇರೆ ಕೆಲಸದಲ್ಲಿಯೇ ಮಗ್ನರಾಗುತ್ತಾರೆ. ಇದರಿಂದ ಸಮಾಜಘಾತುಕ ಶಕ್ತಿಗಳಿಗೆ ಕುಮ್ಮಕ್ಕು ಸಿಗುತ್ತದೆ?? ಎಂದು ಬೊಮ್ಮಾಯಿ ಅವರು ಆರೋಪಿಸಿದರು.ಪೊಲೀಸ್ ಅಧಿಕಾರಿಗಳ ನೇಮಕಾತಿಯಲ್ಲಿ ಆಗಿರುವ ಹಗರಣವೇ ಶಿವಮೊಗ್ಗದಲ್ಲಿ ಗಲಭೆ ಭುಗಿಲೇಳಲು ಕಾರಣ ಎಂದಿದ್ದಾರೆ.ರಾಜ್ಯ ಪ್ರತಿ ಜಿಲ್ಲೆಯಲ್ಲೂ ಕ್ಲಬ್, ರಿಯಲ್ ಎಸ್ಟೇಟ್ ಮಾಫಿಯಾ ಶುರುವಾಗಿದೆ. ರಾಜ್ಯ ಸರ್ಕಾರ ಮಾಡಿರುವ ವರ್ಗಾವಣೆ ಮಾಫಿಯಾದ ಫಲ ಇದು. ಇದನ್ನು ಸಮಗ್ರವಾಗಿ ನಿಭಾಯಿಸದೆ ಹೋದರೆ ಮುಂದೆ ದೊಡ್ಡ ಅನಾಹುತವಾಗಲಿದೆ ಎಂದು ಬೊಮ್ಮಾಯಿ ಎಚ್ಚರಿಕೆ ನೀಡಿದರು.ರಾಜ್ಯದಲ್ಲಿ ಶಾಂತಿ ಕಾಪಾಡಬೇಕು ಎಂದರೆ ಹಬ್ಬಗಳ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರದಿಂದ ಪೊಲೀಸರಿಗೆ ಒಂದು ಸ್ಪಷ್ಟ ನಿರ್ದೇಶನ ಹೋಗಬೇಕು. ತಪ್ಪಾದಾಗ ಅಧಿಕಾರಿಗಳನ್ನು ಯಾವುದೇ ಮುಲಾಜಿಲ್ಲದೆ ಟ್ರಾನ್ಸ್‌ಫರ್ ಮಾಡಬೇಕು. ಆಗ ಮಾತ್ರ ಇಂಥ ಘಟನೆಗಳನ್ನು ತಡೆಯಬಹುದು?? ಎಂದು ಬೊಮ್ಮಾಯಿ ಸಲಹೆ ನೀಡಿದರು.
ಗಾಂಧಿ ವಿರೋಧಿ ನೀತಿ:
ಗಾಂಧಿ ಕಂಡ ಕನಸು ಕರ್ನಾಟಕದಲ್ಲಿ ನನಸು?? ಎಂದು ರಾಜ್ಯ ಸರ್ಕಾರ ಜಾಹೀರಾತು ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇವರು ಮಾಡುವುದೆಲ್ಲಾ ಗಾಂಧಿ ವಿರೋಧಿ ನೀತಿ. ಸುಳ್ಳು ಹೇಳುವುದರಿಂದ ಗಾಂಧಿ ವಿರೋಧಿ ನೀತಿ ಪ್ರಾರಂಭ ಆಗುತ್ತದೆ. ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವುದು. ಸಿಕ್ಕಲ್ಲೆಲ್ಲಾ ಮಧ್ಯದಂಗಡಿ ಶುರು ಮಾಡಿದ್ದಾರೆ. ಪ್ರತೀ ಗ್ರಾಮ ಪಂಚಾಯತಿಯಲ್ಲಿ ಮದ್ಯದಂಗಡಿ ತೆರಯುತ್ತಿದ್ದಾರೆ. ಹೇಳಲು ಮಾತ್ರ ಗಾಂಧಿ ಶಾಂತಿ ಮಂತ್ರ ಮಾಡುವುದೆಲ್ಲಾ ಗಾಂಧಿ ವಿರೋಧಿ ಕೆಲಸಗಳು ಎಂದು ಹೇಳಿದರು.