
ಅಫಜಲಪುರ:ಆ.26: ಶಾಂತಿ ಸುವ್ಯವಸ್ಥೆ ನೆಲೆಸಿರುವ ಸಮಾಜದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಕಾರಣವಾಗುವ ರೌಡಿ ಶೀಟರ್‍ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಗೂಂಡಾ ಕಾಯ್ದೆಯಂತಹ ಕ್ರಮ ಜರುಗಿಸಲಾಗುವುದು ಎಂದು ಪಿ.ಎಸ್.ಐ ರಾಹುಲ ಪವಾಡೆ ಎಚ್ಚರಿಕೆ ನೀಡಿದರು.
ತಾಲೂಕಿನ ದೇವಲ ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ರೌಡಿ ಪಟ್ಟಿಯಲ್ಲಿರುವ ಎಲ್ಲ ಆಸಾಮಿಗಳನ್ನು ಠಾಣೆಗೆ ಕರೆಸಿ ಮಾತನಾಡಿದ ಅವರು ಯಾವುದೋ ಸನ್ನಿವೇಶ, ಪರಿಸ್ಥಿತಿಯ ಒತ್ತಡ ಅಥವಾ ಕಾರಣಾಂತರಗಳಿಂದ ಅಪರಾಧವೆಸಗಿ ರೌಡಿ ಶೀಟರ್ ಆಗಿದ್ದೀರಿ. ಹೀಗಾಗಿ ಇನ್ನು ಮುಂದೆ ಅಂತಹ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೆ ಮುಂಬರುವ ಗಣೇಶ ಚತುರ್ಥಿ, ಧಾರ್ಮಿಕ ಆಚರಣೆಗಳು ಹಾಗೂ ಹಬ್ಬ ಹರಿದಿನಗಳ ಸಂದರ್ಭದಲ್ಲಿ ದೊಂಬಿ ಸೃಷ್ಟಿಸಬಾರದು. ಎಲ್ಲರೂ ಸಂಯಮದಿಂದ ವರ್ತಿಸಿ ಸನ್ನಡತೆಯಿಂದ ನಡೆದು ಕಾನೂನು ಪರಿಪಾಲನೆಗೆ ಮುಂದಾಗಬೇಕು.
ಒಂದು ವೇಳೆ ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಚಟುವಟಿಕೆಯಲ್ಲಿ ಯಾರಾದರು ಭಾಗಿಯಾದರೆ ಪೊಲೀಸ್ ಇಲಾಖೆ ಅಂಥವರ ಮೇಲೆ ತೀವ್ರ ನಿಗಾ ಇಟ್ಟು ಗಡಿಪಾರು ಮಾಡುವುದಾಗಿ ಎಚ್ಚರಿಕೆ ನೀಡಿದ ಅವರು ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದೆ ಸನ್ನಡತೆಯಿಂದ ನಡೆದುಕೊಂಡರೆ ಅವರ ಹೆಸರನ್ನು ರೌಡಿ ಶೀಟರ್ ಪಟ್ಟಿಯಿಂದ ಕೈ ಬಿಡುವಂತೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಶಿಫಾರಸ್ಸು ಮಾಡುವುದಾಗಿ ತಿಳಿಸಿದರು.