ಶಾಂತಿ ಸುವ್ಯವಸ್ಥೆಗೆ ಕ್ರಮ: ಎ.ಡಿ.ಜಿ.ಪಿ

ಹುಬ್ಬಳ್ಳ, ಆ 29: ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯದ ಇನ್ನಿತರೆಡೆ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ, ಎಲ್ಲೆಡೆ ಶಾಂತಿ-ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಕೊಳ್ಳಲಾಗುತ್ತದೆ ಎಂದು ಎ.ಡಿ.ಜಿ.ಪಿ. ಅಲೋಕಕುಮಾರ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಈದ್ಗಾದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ಕೇಳಲಾಗಿದ್ದು, ಅದು ಹು-ಧಾ ಮಹಾನಗರ ಪಾಲಿಕೆಗೆ ಬಿಟ್ಟ ವಿಚಾರ, ಪಾಲಿಕೆ ತೆಗೆದುಕೊಳ್ಳುವ ನಿರ್ಧಾರದಂತೆ ಕ್ರಮ ಕೈಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಶಾಂತಿ-ಸುವ್ಯವಸ್ಥೆ ಪರಿಶೀಲನೆಗೆಂದು ತಾವು ಇಂದು ನಗರಕ್ಕೆ ಭೇಟಿ ನೀಡಿದ್ದಾಗಿ ಹೇಳಿದ ಅವರು, ಡಿ.ಜೆ. ಬಳಕೆಯು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ನಡೆಯಬೇಕು, ಆದೇಶ ಮೀರಿದರೆ ಕ್ರಮ ಖಂಡಿತ ಎಂದರು.
ಚಿತ್ರದುರ್ಗದ ಮುರಘಾ ಶರಣರನ್ನು ವಶಕ್ಕೆ ಪಡೆದಿರುವ ಕುರಿತು ತಮಗಿನ್ನೂ ಮಾಹಿತಿಯಿಲ್ಲ ಎಂದ ಅವರು, ಈ ಪ್ರಕರಣದ ತನಿಖೆ ಸರಿಯಾದ ರೀತಿಯಲ್ಲೇ ನಡೆದಿದೆ. ಪೋಕ್ಸೊ ಕಾಯ್ದೆಯಡಿ ಏನು ವಿಚಾರಣೆ ಮಾಡಬೇಕೋ ಅದೇರೀತಿ ವಿಚಾರಣೆ ನಡೆಯುತ್ತದೆ ಎಂದು ನುಡಿದರು.