
ಕಲಬುರಗಿ,ಆ 19: ಈಗ ಶ್ರಾವಣ ಮಾಸ.ಬಹುತೇಕ ಕಡೆ ಭಜನೆಯ ನಿನಾದ ಮೊಳಗುತ್ತಿದೆ.ಕೆಲವು ಜನ ಸಂಗೀತ ಭಜನೆ ಇಷ್ಟ ಪಟ್ಟರೆ ಕೆಲವು ಕಡೆಯ ಜನ ಗ್ರಾಮೀಣ ಸೊಗಡಿನ ಭಜನೆ ಇಷ್ಟ ಪಡುವರು .ಒಟ್ಟಿನಲ್ಲಿ ಭಜನೆ ಸಕಲ ಜೀವ ರಾಶಿಗಳ ಮನಸ್ಸಿಗೆ ಶಾಂತಿ ನೆಮ್ಮದಿ ಜೊತೆಗೆ ಮನುಷ್ಯನ ಬದುಕಿಗೊಂದು ಪಾಠ ಕಲಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಬಹುತೇಕ ನಗರ ಪ್ರದೇಶಗಳಲ್ಲಿ ಭಜನೆ ಮಾಡುವವರ
ಸಂಖ್ಯೆ ಇಳಿಮುಖವಾಗಿದ್ದು ಅದು ಹಳ್ಳಿಗಳಿಗೂ ಕಾಲಿಟ್ಟಿದೆ. ಪೂರ್ವಜರ ಜನಪದ ಶೈಲಿಯ ಭಜನೆ ಶ್ರೀಮಂತಿಕೆಯಿಂದ ಕೂಡಿದೆ.
ಭಯ ಭಕ್ತಿಯಿಂದ ಭಜನೆ ಮಾಡುವುದ ಜೊತೆಗೆ ಭಜನೆ ಆಲಿಸುವುದು ಕೂಡಾ ಭಗವಂತನಿಗೆ ಇಷ್ಟವಾಗುವದು.ದೇವಸ್ಥಾನ ಮಠ ಮಂದಿರಗಳಲ್ಲಿ, ಜಾತ್ರೆಗಳಲ್ಲಿ ಇತ್ತೀಚಿಗೆ ಅಹೋರಾತ್ರಿ ಮಾಡುತ್ತಿದ್ದ ಭಜನೆ ದಿನದಿಂದ ದಿನಕ್ಕೆ ಅದರ ಮಹತ್ವ ಕಳೆದುಕೊಳ್ಳುತ್ತಿದೆ. ಇಂತಹ ಒಂದು ಕಲೆಯನ್ನು ಹಲವಾರು ಅಜ್ಞಾತ ಕಲಾಕಾರರು ವರ್ಷಗಳಿಂದ ಸದ್ದಿಲ್ಲದೇ ಪೂಜಿಸುತ್ತ ಆರಾಧಿಸುತ್ತ ಬಂದಿದ್ದಾರೆ.ಅದ್ಭುತವಾಗಿ ಹಾರ್ಮೋನಿಯಂ, ಕೊಳಲು, ತಬಲಾ,
ಚಳ್ಳಂಗಳನ್ನು ನುಡಿಸುತ್ತ ದೇವಸ್ಥಾನ ಮಠ ಮಂದಿರ ಜಾತ್ರೆಗಳ
ಸಮಯದಲ್ಲಿ ಅಹೋರಾತ್ರಿ ಆಯಾ ಸ್ಥಳದಲ್ಲಿ ಆಯಾ ಸಂದರ್ಭಕ್ಕೆ ಅನುಗುಣವಾಗಿ ಭಾವ ಗೀತೆ, ಭಕ್ತಿಗೀತೆ, ತತ್ವ ಪದ, ಜಾನಪದ ಹಾಡನ್ನು ಕಂಚಿನ ಕಂಠದಿಂದ ಹಾಡಿ ಜನರನ್ನು ಮಂತ್ರ ಮುಗ್ಧರನ್ನಾಗಿಸುತ್ತಾರೆ.
ಭಜನೆಯನ್ನು ಭಯಭಕ್ತಿ ಶ್ರದ್ಧೆಯ ಕಾಯಕವಾಗಿಸಿಕೊಂಡಿದ್ದಾರೆ.ನಮ್ಮ ಪೂರ್ವಜರ ಭಜನೆಯ ಸಂಪ್ರದಾಯ ಉಳಿಸಿ ಬೆಳೆಸುವ ಪ್ರಯತ್ನಗಳು
ಜನಪದ ಅಕಾಡೆಮಿವತಿಯಿಂದ ನಡೆಯಲಿ ಎಂದು ಆಶಯ.
-ಗುರು ಕೆಪಿ