ಬೆಂಗಳೂರು, ಜೂ. ೧- ಬಜರಂಗ ದಳವನ್ನು ಮಾತ್ರ ನಿಷೇಧ ಮಾಡುತ್ತೇವೆ ಎಂದು ಹೇಳಿಲ್ಲ. ಆದರೆ, ಶಾಂತಿ ಕದಡುವ ಸಂಸ್ಥೆ, ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಅಂತಹ ಸಂಘಟನೆಗಳ ನಿಷೇಧ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ವಿಧಾನಸೌಧದಲ್ಲಿಂದು ತಮ್ಮ ಕಚೇರಿಯ ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕವನ್ನು ಕುವೆಂಪು ಅವರ ಆಶಯದಂತೆ ಸರ್ವ ಜನಾಂಗದ ಶಾಂತಿಯ ತೋಟ ಮಾಡುತ್ತೇವೆ ಎಂದರು.ರಾಜ್ಯದಲ್ಲಿ ಯಾವುದೇ ರೀತಿಯ ನೈತಿಕ ಪೊಲೀಸ್‌ಗಿರಿ, ಕೋಮು ಚಟುವಟಿಕೆಗಳಿಗೆ ಅವಕಾಶವಿಲ್ಲ. ಶಾಂತಿ ಕದಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ, ನಿಷೇಧ ಮಾಡುತ್ತೇವೆ ಎಂದು ಹೇಳಿದ್ದೇವೆ. ಬಜರಂಗದಳವನ್ನು ಮಾತ್ರ ನಿಷೇಧ ಮಾಡುತ್ತೇವೆ ಎಂದು ಹೇಳಿಲ್ಲ ಎಂದರು.ಗೃಹ ಇಲಾಖೆ ಒಂದು ಉತ್ತಮ ಇಲಾಖೆ, ಲಾಠಿ ಏಟು, ಗುಂಡು ಹಾರಿಸುವುದು ಎಲ್ಲವೂ ಇಲಾಖೆಯಲ್ಲಿ ಇದ್ದೇ ಇದೆ ಎಂದು ಹೇಳುವ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡಲು ಸರ್ಕಾರ ಯಾವುದೇ ಕ್ರಮಕ್ಕೆ ಸಿದ್ಧ ಎಂಬುದನ್ನು ಹೇಳಿದರು.ಜನರ ನಿರೀಕ್ಷೆಯಂತೆ ಆಡಳಿತ ನೀಡಬೇಕು. ಅದರಂತೆ ಗೃಹ ಇಲಾಖೆಯೂ ಕೆಲಸ ಮಾಡುತ್ತದೆ ಎಂದರು.ನಾವು ಚುನಾವಣಾ ಸಂದರ್ಭದಲ್ಲಿ ಒಳ್ಳೆಯ ಆಡಳಿತ ನೀಡುವುದಾಗಿ ಹೇಳಿದ್ದೇವೆ. ಅದೇ ರೀತಿಯ ಆಡಳಿತ ಮಾಡಿ ತೋರಿಸುತ್ತೇವೆ ಎಂದು ಅವರು ಹೇಳಿದರು
ಗ್ಯಾರಂಟಿ ಯೋಜನೆ:ನಾಳೆ ತೀರ್ಮಾನ
ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ನೀಡಿರುವ ೫ ಗ್ಯಾರಂಟಿಗಳನ್ನು ಅನುಷ್ಠಾನ ಮಾಡುವ ಸಂಬಂಧ ನಾಳೆ ತೀರ್ಮಾನ ಮಾಡುತ್ತೇವೆ. ನಾಳೆಯವರೆಗೂ ಕಾಯಿರಿ ಮಾರ್ಗಸೂಚಿಗಳನ್ನು ಪ್ರಕಟಿಸುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.
ನಮ್ಮ ಸಂಪ್ರದಾಯದಂತೆ ಕಚೇರಿ ಪೂಜೆ ಮಾಡಿ ಕೆಲಸ ಆರಂಭಿಸಿದ್ದೇನೆ ಎಂದು ಅವರು ಹೇಳಿದರು.