ಶಾಂತಿಯುವಾಗಿ ಬಕ್ರೀದ್ ಹಬ್ಬ ಆಚರಣೆ

ದೇವದುರ್ಗ,ಜೂ.೨೯-
ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್‌ಅನ್ನು ತಾಲೂಕಾದ್ಯಂತ ಗುರುವಾರ ಶಾಂತಿಯುತವಾಗಿ ಆಚರಣೆ ಮಾಡಲಾಯಿತು. ಪಟ್ಟಣದ ಹಳೇ ಬಸ್ ನಿಲ್ದಾಣ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಬೆಳಗ್ಗೆ ೮.೩೦ಕ್ಕೆ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು. ಈ ವರ್ಷ ಉತ್ತಮ ಮಳೆ ಬೆಳೆ ಬರಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಧರ್ಮಗುರು ಜುನೇದ್ ಹಾಫಿಸಾಬ್ ಮಾತನಾಡಿ, ಬಕ್ರೀದ್ ಹಬ್ಬ ಮುಸ್ಲಿಮರ ಪವಿತ್ರ ಆಚರಣೆಯಾಗಿದ್ದು, ತ್ಯಾಗ ಬಲಿದಾನದ ಸಂಕೇತವಾಗಿ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಈ ವರ್ಷ ಮುಂಗಾರು ಕಳೆದರೂ ಸಮರ್ಪಕವಾಗಿ ಮಳೆ ಬಾರದ ಕಾರಣ, ರೈತರು ಸೇರಿ ಸಕಲ ಜೀವರಾಶಿಗಳ ಅನುಕೂಲಕ್ಕಾಗಿ ಮಳೆ ಬೆಳೆ ಉತ್ತಮವಾಗಿ ಬರಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.
ಪ್ರತಿದಿನ ಪ್ರಾರ್ಥನೆ ಮಾಡಿ ದೇವರನ್ನು ನೆನೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವ ಜತೆಗೆ ಮನೆಯಲ್ಲಿ ಶಾಂತಿ ನೆಲೆಸಲಿದೆ. ನಾಡಿನದಲ್ಲಿ ಶಾಂತಿ ನೆಲೆಸಲು ಹಿಂದು ಮುಸ್ಲಿಮರು ಸಹೋರರಂತೆ ಜೀವನ ನಡೆಸಬೇಕು. ದುಶ್ಚಟಗಳಿಂದ ದೂರವಿದ್ದು ಕೆಲಸವನ್ನು ಮೈಗೂಡಿಸಿಕೊಳ್ಳಬೇಕು. ನೀವು ದುಡಿಯುವ ಸ್ವಲ್ಪ ಸಂಪತ್ತನ್ನು ಬಡವರಿಗೆ ದಾನಧರ್ಮ ಮಾಡಬೇಕು ಎಂದು ಬೋಧನೆ ಮಾಡಿದರು.
ಹಿರಿಯರಾದ ಬಹದ್ದೂರ್ ಖಾನ್ ಗೌರಂಪೇಟೆ, ಅಮೀನ್ ಬಾಷಾ ಗೌರಂಪೇಟೆ, ಇಸ್ಮಾಯಿಲ್, ಅಬ್ಬಾಸ್ ಕಬಡ್ಡಿ, ಇರ್ಫಾನ್, ಶಬ್ಬೀರ್ ಸೇರಿದಂತೆ ಇತರರಿದ್ದರು.
ವಿವಿಧೆಡೆ ಆಚರಣೆ:
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಾಲಹಳ್ಳಿ, ಗಬ್ಬೂರು, ಮಸರಕಲ್, ಗಲಗ, ಸುಂಕೇಶ್ವರಹಾಳ, ಚಿಂಚೋಡಿ ಸೇರಿದಂತೆ ವಿವಿಧ ಗ್ರಾಮಗಳ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಶಾಂತಿಯುತವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು. ವಿವಿಧ ರಾಜಕೀಯ ನಾಯಕರು ಶುಭಾಷಯ ಕೋರಿದರು.