ಶಾಂತಿಯುತ ಸಮಾಜ ನಿಮಾ೯ಣಕ್ಕೆ ಸವ೯ರ ಸಹಕಾರ ಅಗತ್ಯ : ಎಸ್‌.ಪಿ. ನಾಗೇಶ

ಭಾಲ್ಕಿ:ಜ.5: ಅಪರಾಧ ರಹಿತ, ಶಾಂತಿಯುತ, ಮೌಲ್ಯಯುತ ಸಮಾಜ, ಸದೃಢ ರಾಷ್ಟ್ರ ನಿಮಾ೯ಣಕ್ಕೆ ಎಲ್ಲ ನಾಗರಿಕರ ಸಹಕಾರ ಅಗತ್ಯ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್‌.ಹೇಳಿದರು.

ಪಟ್ಟಣದ ಪೊಲೀಸ್‌ ಕವಾಯತು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆಯ ಸಮಾರೋಪ, ಉತ್ತಮ ಸಮಾಜ ನಿಮಿ೯ಸಲು ಸಹಕರಿಸಿದ ಸಾವ೯ಜನಿಕರಿಗೆ ಸನ್ಮಾನಿಸಿ ಮಾತನಾಡಿದರು.

ಕಳ್ಳತನ, ದರೋಡೆ ಸೇರಿದಂತೆ ಯಾವುದೇ ತರಹದ ಅಪರಾಧ ಪ್ರಕರಣವನ್ನು ತಡೆಯುವಲ್ಲಿ ಸಾವ೯ಜನಿಕರು ಪೊಲೀಸ್‌ರಿಗೆ ಎಲ್ಲ ಹಂತಗಳಲ್ಲಿಯೂ ಸಹಾಯ, ಸಹಕಾರ ನೀಡಬೇಕಾಗುತ್ತದೆ. ಕೇವಲ ಪೊಲೀಸ್‌ ಇಲಾಖೆಯಿಂದ ಮಾತ್ರ ಸುಸಂಸ್ಕೃತ, ನೈತಿಕ ಸಮಾಜವನ್ನು ತಯಾರಿಸುವುದು ಕಷ್ಟದ ಕೆಲಸವಾಗುತ್ತದೆ ಎಂದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್‌ ಮಾತನಾಡಿ, ಭಾಲ್ಕಿ ನಗರದ ಸುಂದರತೆಯನ್ನು ಹೆಚ್ಚಿಸಲು ಡಿವೈಎಸ್‌ಪಿ ಕಚೇರಿ ಆವರಣದಲ್ಲಿ ಸುಮಾರು 3 ಸಾವಿರ ಗಿಡಗಳನ್ನು ನೆಟ್ಟಿರುವುದು ಶ್ಲಾಘನೀಯ ಕಾಯ೯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗುರುಬಸವ ಪಟ್ಟದ್ದೇವರು ಮಾತನಾಡಿ, ಬಸವಾದಿ ಶರಣರ ತತ್ವಗಳ ಆಚರಣೆಯಿಂದ ಮೌಲ್ಯಯುತ ರಾಷ್ಟ್ರ ನಿಮಿ೯ಸಲು ಸಾಧ್ಯವಿದೆ. ಎಲ್ಲರೂ ಕಾಯಕ, ದಾಸೋಹ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ತಿಳಿ ಹೇಳಿದರು. ಸಿಪಿಐ ರಾಘವೇಂದ್ರ, ಫಾಲಾಕ್ಷಯ್ಯ ಹಿರೇಮಠ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.