ಶಾಂತಿಯುತ ವಾತಾವರಣ ನಿರ್ಮಾಣ ಎಲ್ಲರ ಜವಾಬ್ದಾರಿ

ಕಲಬುರಗಿ.ಮೇ.29: ಇಂದು ಇಡೀ ಜಗತ್ತೇ ‘ಶಾಂತಿ’ಯ ಮಂತ್ರ ಪಠಿಸಬೇಕಾಗಿದೆ. ಭಯೋತ್ಪಾದನೆ, ವೈಷಮ್ಯ, ಕೊಲೆ, ಸುಲಿಗೆ, ಭ್ರಷ್ಟಾಚಾರದಂತಹ ಅನೀತಿಗಳಿಂದ ಜಗತ್ತಿನಲ್ಲಿ ಅಶಾಂತಿ ವಾತಾವರಣ ಉಂಟಾಗುತ್ತಿದೆ. ಪ್ರತಿಯೊಬ್ಬರು ದೇವರ ಮಕ್ಕಳು, ನಾವೆಲ್ಲರು ಒಂದೇ ಎಂಬ ಭಾವನೆ ಮೂಡಬೇಕು. ಎಲ್ಲೆಡೆ ಶಾಂತಿಯುತ ವಾತಾವರಣ ನಿರ್ಮಾಣವಾಗಲು ಸರ್ವರ ಸಹಕಾರ ಅಗತ್ಯವಾಗಿದೆ ಎಂದು ಚಿಂತಕ ಬಸಯ್ಯಸ್ವಾಮಿ ಹೊದಲೂರ ಅಭಿಪ್ರಾಯಪಟ್ಟರು.
ನಗರದ ಸಮೀಪದ ಝಾಪೂರ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ
ಸೋಮವಾರ ಜರುಗಿದ 2900ನೇ ಕಾರ್ಯಕ್ರಮವಾದ ‘ಅಂತಾರಾಷ್ಟ್ರೀಯ ಶಾಂತಿಪಾಲಕರ ದಿನಾಚರಣೆ’ಯನ್ನು ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ ಮಾತನಾಡಿ, ‘ಶಾಂತಿ’ಯೆಂಬದು ಕೇವಲ ಎರಡಕ್ಷರದ ಶಬ್ದವಲ್ಲ. ಅದರಲ್ಲಿ ಬಹುದೊಡ್ಡ ಶಕ್ತಿಯಿದೆ. ಆಧುನಿಕ ಕಾಲದ ಒತ್ತಡದ ಬದುಕಿನಲ್ಲಿಂದು ಮಾನವ ತನಗೆ ಲಭ್ಯವಿರುವುದನ್ನು ಅನುಭವಿಸಿ ನೆಮ್ಮದಿ ಹಾಗೂ ಶಾಂತಿಯಿಂದ ಜೀವಿಸುವದನ್ನು ಬಿಟ್ಟು, ಮತ್ತೊಬ್ಬರ ಜೊತೆಗೆ ಹೋಲಿಕೆ ಮಾಡುತ್ತಿರುವದರಿಂದ ಕೊರತೆಯೆನಿಸಿ, ಮಾನಸಿಕ ಅಶಾಂತಿಯನ್ನು ಎದುರಿಸುತ್ತಿದ್ದಾನೆ. ಮಾನವೀಯ ಮೌಲ್ಯಗಳು ನಶಿಸುತ್ತಿರುವುದೇ ಅಶಾಂತಿಗೆ ಪ್ರಮುಖವಾದ ಕಾರಣವಾಗಿದೆ. ಮಹಾತ್ಮ ಗಾಂಧಿಜಿಯವರು ಶಾಂತಿ, ಅಹಿಂಸೆಯ ಸಾಕಾರ ಮೂರ್ತಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಶಾಲೆಯ ಮುಖ್ಯ ಶಿಕ್ಷಕ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಶಿಕ್ಷಕರಾದ ಲಕ್ಕುನಾಯಕ, ಶಾಂತಾಬಾಯಿ ಹಿರೇಮಠ, ವೀರಮ್ಮ ಹಿರೆಕೆನ್ನೂರ್, ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ ಮಾಂಗ್, ಗ್ರಾ.ಪಂ.ಸದಸ್ಯರಾದ ಪೀರಪ್ಪ ದೊಡ್ಡಮನಿ, ಪ್ರಮುಖರಾದ ಅರುಣಕುಮಾರ ಕಟ್ಟಿಮನಿ, ಸುಧಾಕರ ಜಿ.ಅವಟೆ, ಸಂಗೀತಾ ಕಟ್ಟಿಮನಿ, ಶಿಲ್ಪಾ ಹಳ್ಳಿಕಾರ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.