ಶಾಂತಿಯುತ ಮತದಾನ : ಜಿಲ್ಲೆಯಲ್ಲಿ ಒಟ್ಟಾರೆ 80.32 ರಷ್ಟು ಮತದಾನ

ಗದಗ, ಡಿ. 28- ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ಮತದಾನವು ಗದಗ ಜಿಲ್ಲೆಯ ಮುಂಡರಗಿ, ನರಗುಂದ, ರೋಣ ಹಾಗೂ ಗಜೇಂದ್ರಗಡ ತಾಲೂಕುಗಳ ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 850 ಸ್ಥಾನಗಳಿಗೆ ಭಾನುವಾರ ನಡೆದ ಮತದಾನ ಶಾಂತಿಯುತವಾಗಿತ್ತು. ಬಹುತೇಕ ಎಲ್ಲಾ ಮತಗಟ್ಟೆಗಳಲ್ಲಿ ಬೆಳಗಿನಿಂದಲೇ ಬಿರುಸಿನ ಮತದಾನ ಆರಂಭವಾಗಿತ್ತು.
ರೋಣ ತಾಲ್ಲೂಕಿನ ಗ್ರಾಮಗಳ ಮತಗಟ್ಟೆಗಳಲ್ಲಿ ಮಹಿಳೆಯರು ಮತ್ತು ಪುರುಷರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದು ಕಂಡುಬಂದಿತು. ಗುಜಮಾಗಡಿ, ಚಿಕ್ಕಮಣ್ಣೂರ, ಬೆಳವಣಿಕೆ, ಕರಮುಡಿ, ಮೆಣಸಗಿ ಸೇರಿದಂತೆ ಹಲವು ಮತಗಟ್ಟೆಗಳಲ್ಲಿ ಪುರುಷರು ಮತ್ತು ಮಹಿಳೆಯರು ಪ್ರತ್ಯೇಕ ಸಾಲಿನಲ್ಲಿ ನಿಂತು ಮತಹಕ್ಕು ಚಲಾಯಿಸಿದರು. ಹೀಗೆ ಹಲವು ಗ್ರಾಮಗಳ ಮತಗಟ್ಟೆಗಳಲ್ಲಿ ಮತದಾರರು ಮತದಾನ ಮಾಡಲು ಗುರುತಿನ ಚೀಟಿಯೊಂದಿಗೆ ಸರದಿ ಸಾಲಿನಲ್ಲಿ ನಿಂತು ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದು ವಿಶೇಷವಾಗಿತ್ತು.
ಎರಡನೇ ಹಂತದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಎಲ್ಲಾ ಮತಗಟ್ಟೆಗಳಲ್ಲಿ ಥರ್ಮಲ್ ಸ್ಕ್ಯಾನರ್ ಮೂಲಕ ಮತದಾರರನ್ನು ತಪಾಸಣೆ ಮಾಡಿ ಮತಗಟ್ಟೆಗೆ ಕಳುಹಿಸುತ್ತಿದ್ದ ದೃಶ್ಯ ಕಂಡುಬಂದಿತು. ಜತೆಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು, ಹಾಗೆಯೇ 4 ರಿಂದ 5 ಗಂಟೆ ಅವಧಿಯಲ್ಲಿ ಕೋವಿಡ್-19 ಶಂಕಿತರಿಗೆ ಮತಹಕ್ಕು ಚಲಾಯಿಸಲು ಅವಕಾಶ ನೀಡಲಾಗಿತ್ತು.
ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಯ ಸಮಯವಾರು ಒಟ್ಟಾರೆ ಮತದಾನದ ವಿವರ ಇಂತಿದೆ; ಮುಂಜಾನೆ 9 ಗಂಟೆಯವರೆಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಶೇ. 8.22 ನರಗುಂದ ಶೇ 8.29, ರೋಣ ಶೇ. 6.62 ಹಾಗೂ ಗಜೇಂದ್ರಗಡ ಶೇ. 7.74 ಒಟ್ಟು ಶೇ. 7.69 ರಷ್ಟು ಮತದಾನವಾಗಿದೆ.
ಮುಂಜಾನೆ 11 ಗಂಟೆಯವರೆಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಶೇ. 24.23 ನರಗುಂದ ಶೇ 24.59, ರೋಣ ಶೇ. 20.16 ಹಾಗೂ ಗಜೇಂದ್ರಗಡ ಶೇ. 25.46 ಒಟ್ಟು ಶೇ. 23.53 ರಷ್ಟು ಮತದಾನವಾಗಿರುತ್ತದೆ ಮಧ್ಯಾಹ್ನ 1 ಗಂಟೆಯವರೆಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಶೇ. 44.50 ನರಗುಂದ ಶೇ 46.96, ರೋಣ ಶೇ. 42.02 ಹಾಗೂ ಗಜೇಂದ್ರಗಡ ಶೇ. 44.91 ಒಟ್ಟು ಶೇ. 44.51 ರಷ್ಟು ಮತದಾನವಾಗಿದೆ.
ಮಧ್ಯಾಹ್ನ 3 ಗಂಟೆಯವರೆಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಶೇ. 64.88 ನರಗುಂದ ಶೇ 66.45, ರೋಣ ಶೇ. 60.71 ಹಾಗೂ ಗಜೇಂದ್ರಗಡ ಶೇ. 62.29 ಒಟ್ಟು ಶೇ. 63.48 ರಷ್ಟು ಮತದಾನವಾಗಿರುತ್ತದೆ. ಸಂಜೆ 5 ಗಂಟೆಯವರೆಗೆ ಅಂತಿಮವಾಗಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಶೇ. 82.13 ನರಗುಂದ ಶೇ 83.64, ರೋಣ ಶೇ. 77.41 ಹಾಗೂ ಗಜೇಂದ್ರಗಡ ಶೇ. 78.51 ಒಟ್ಟು ಶೇ. 80.32 ರಷ್ಟು ಮತದಾನವಾಗಿರುತ್ತದೆ.
ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಹಾಗೂ ಜಿಲ್ಲಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ ಅವರು ರೋಣ ತಾಲ್ಲೂಕಿನ ಗುಜಮಾಗಡಿ, ಡ.ಸ.ಹಡಗಲಿ, ಸವಡಿ, ನರಗುಂದ ತಾಲ್ಲೂಕಿನ ಹದ್ಲಿ, ಕಲಕೇರಿ ಗ್ರಾಮಗಳ ಮತಗಟ್ಟೆಗಳಿಗೆ ಬೇಟಿ ನೀಡಿ ಮತದಾನ ಪ್ರಕ್ರಿಯೇ ವೀಕ್ಷಿಸಿದರು.