ಶಾಂತಿಯುತ ಮತದಾನ: ಚಿಕ್ಕತಡಸಿ, ಹಿರೇತಡಸಿಯಲ್ಲಿ ಬಹಿಷ್ಕಾರ

ರಾಮದುರ್ಗ, ಏ18: ಮಲಪ್ರಭೆ ಪ್ರವಾಹ ಪೀಡಿತ ತಾಲೂಕಿನ ಚಿಕ್ಕತಡಸಿ ಹಾಗೂ ಹಿರೇತಡಸಿ ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ ಹೊರತು ಪಡಿಸಿ ತಾಲೂಕಿನಲ್ಲಿ ಶನಿವಾರ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಮತದಾನ ಅತ್ಯಂತ ಶಾಂತಯುತವಾಗಿ ನಡೆಯಿತು.
ಬೆಳಿಗ್ಗೆ ಅತ್ಯಂತ ಉತ್ಸಾಹದಿಂದ ಮತದಾರರು ಮತಗಟ್ಟೆ ಬಂದು ಮತ ಚಲಾಯಿಸಿದರೆ ಮಧ್ಯಾಹ್ನದ ವೇಳೆಗೆ ಅತ್ಯಂತ ನಿರಸ ಪ್ರತಿಕ್ರಿಯೆ ವ್ಯಕ್ತವಾಯಿತು. ನಂತರ ಸಂಜೆ ವೇಳೆಗೆ ಮತ್ತೆ ಉತ್ಸಾಹದ ಮತದಾನ ನಡೆಯಿತು. ಯಾವದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.
ಮಲಪ್ರಭಾ ನದಿ ದಂಡೆಯಲ್ಲಿರುವ ಚಿಕ್ಕತಡಸಿ ಹಾಗೂ ಹಿರೇತಡಸಿ ಗ್ರಾಮಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸರಕಾರ ವಿಳಂಬ ಮಾಡಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ಶನಿವಾರ ಅಧಿಕಾರಿಗಳ ತಂಡ ಗ್ರಾಮಕ್ಕೆ ತೆರಳಿ ಮತದಾನ ಮಾಡುವಂತೆ ಗ್ರಾಮಸ್ಥರ ಮನವೊಲಿಸಿದರೂ ಪಟ್ಟುಬಿಡದ ಗ್ರಾಮಸ್ಥರು ಮತದಾನದಿಂದ ದೂರಳಿದರು.
ಸಹಾಯಕ ಚುನಾವಣಾಧಿಕಾರಿ ಅಶೋಕ ಗುರಾಣಿ, ಪ್ರೋಬೇಶನರಿ ಎಸಿ ಅಭಿಷೇಕ್.ವಿ, ತಹಸೀಲ್ದಾರ ಎ. ಡಿ. ಅಮರವಾಡಗಿ, ಡಿವೈಎಸ್‍ಪಿ ರಾಮನಗೌಡ ಹಟ್ಟಿ, ಪಿಎಸ್‍ಐ ನಿಂಗನಗೌಡ ಕಟ್ಟಿಮನಿಗೌಡ್ರ ಸೇರಿದಂತೆ ಗ್ರಾಮಸ್ಥರ ಮನವೋಲಿಸಲು ಎಷ್ಟೇ ಪ್ರಯತ್ನಿಸಿದರು. ಗ್ರಾಮಸ್ಥರು ನಮಗೆ ನ್ಯಾಯ ಸಿಗುವವರೆಗೂ ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ ಎಂದರು.
ಗ್ರಾಮದ ಮುಖಂಡರಾದ ಐ.ಎಸ್.ಹರನಟ್ಟಿ, ಸೋಮರಡ್ಡಿ ಗೊಂದಿ, ಹಣಮರಡ್ಡಿ ಗೊಂದಿ, ಶಿವಪ್ಪ ಹರನಟ್ಟಿ, ಹನಮಂತ ಹಳ್ಳಿ, ವಿರುಪಾಕ್ಷಿಗೌಡ ಕುಲಕರ್ಣಿ, ಬಸವರಾಜ ಖಾನಾಪೂರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಶಾಸಕ ಮಹಾದೇವಪ್ಪ ಯಾದವಾಡ ಅವರು ಬಟಕುರ್ಕಿ ಗ್ರಾಮದ ಮತಗಟ್ಟೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರೆ, ಮಾಜಿ ಶಾಸಕ ಅಶೋಕ ಪಟ್ಟಣ ಅವರು ಪುರಸಭೆÀ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಶ್ರೀ ಧನಲಕ್ಷ್ಮೀ ಶುಗರ್ ಅಧ್ಯಕ್ಷ ಮಲ್ಲಣ್ಣ ಯಾದವಾಡ ದಂಪತಿ ಸಮೇತ ಬಟಕುರ್ಕಿಯಲ್ಲಿ ಮತದಾನ ಮಾಡಿದರು.
ಪಿಂಕ್ ಮತಗಟ್ಟೆ:
ತಾಲೂಕಿನ ಎರಡು ಕಡೆಗಳಲ್ಲಿ ಪಿಂಕ್ ಮತಗಟ್ಟೆ ಆಕರ್ಷಿಣೀಯವಾಗಿತ್ತು. ಪಟ್ಟಣದ ಭಾಗ್ಯನಗರ ಮತಗಟ್ಟೆ ಹಾಗೂ ಹುಲಕುಂದ ಗ್ರಾಮದ ಮತಗಟ್ಟೆ ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮಹಿಳಾ ಚುನಾವಣೆ ಸಿಬ್ಬಂದಿಗಳು ಪಿಂಕ್ ಸೀರೆ ಧರಿಸಿ ಕಾರ್ಯನಿರ್ವಹಿಸಿದರು.