
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.13 :- ಯಾವುದೇ ಕೋಮುಗಲಭೆ, ಮತದಾರರಿಗೆ ಹಣ ಹಾಗೂ ಇತರೆ ಆಮಿಷವೊಡ್ಡದೆ, ಪ್ರಚೋದನಕಾರಿ ಭಾಷಣ ಮಾಡದೆ, ನೀತಿಸಂಹಿತೆ ಉಲ್ಲಂಘನೆ ಮಾಡದೆ ಇನ್ನಿತರೆ ಚುನಾವಣಾ ಸದಾಚಾರ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಚುನಾವಣಾ ನಿಯಮ ನಿಬಂಧನೆಗಳಿಗೆ ಬದ್ಧರಾಗಿ ಶಾಂತಿಯುತ ಚುನಾವಣೆಗೆ ಎಲ್ಲಾ ಪಕ್ಷದವರ ಸಹಕಾರ ಅತ್ಯಗತ್ಯ ತಪ್ಪದೆ ಎಲ್ಲರೂ ಚುನಾವಣಾ ಸದಾಚಾರ ಸಂಹಿತೆ ಪಾಲಿಸಿ ಎಂದು ಕೂಡ್ಲಿಗಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಹಾಗೂ ಚುನಾವಣಾ ಸ್ವೀಪ್ ಸಮಿತಿ ತಾಲೂಕು ಅಧ್ಯಕ್ಷ ವೈ. ರವಿಕುಮಾರ ಪಕ್ಷದ ಮುಖಂಡರಿಗೆ ತಿಳಿಸಿದರು.
ಅವರು ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಏಪ್ರಿಲ್ 13ರಿಂದ ಚುನಾವಣಾ ನಾಮಪತ್ರ ಪ್ರಕ್ರಿಯೆ ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲಿ ಚುನಾವಣಾ ನಾಮಪತ್ರ ಸಲ್ಲಿಸುವ ಪಕ್ಷದ ಅಭ್ಯರ್ಥಿಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ಅನುಸರಿಸಬೇಕಾದ ನಿಯಮ ಹಾಗೂ ನಿಬಂಧನೆಗಳು, ಸಲ್ಲಿಸಬೇಕಾಗಿರುವ ದಾಖಲೆಗಳು ಕುರಿತಾಗಿ ಕೂಡ್ಲಿಗಿ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ಜಗದೀಶ ತಿಳಿಸಿದ ನಂತರ ಸದಾಚಾರ ಸಂಹಿತೆ ಕುರಿತಾಗಿ ವೈ ರವಿಕುಮಾರ ಮಾತನಾಡುತ್ತ ಮಾದರಿ ನೀತಿ ಸಂಹಿತೆ ಚುನಾವಣಾ ವೇಳಾಪಟ್ಟಿ ಘೋಷಣೆಯಾದಾಗಿನಿಂದ ಮತಎಣಿಕೆ ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ಜಾರಿಯಲ್ಲಿರುತ್ತದೆ.
ರಾಜಕೀಯ ಪಕ್ಷದ ಅಭ್ಯರ್ಥಿಗಳು ಜಾತ್ಯತೀತದ ನಿಲುವಿನಲ್ಲಿ ತತ್ವಸಿದ್ಧಾಂತಗಳ ಸಮರ್ಥನೆ ಮಾಡಿಕೊಂಡು ಕೋಮು ಸೌಹಾರ್ದತೆ ಕಾಪಾಡಿಕೊಂಡು ಮತದಾರರಿಗೆ ಯಾವುದೇ ಆಸೆ, ಆಮಿಷ, ಭ್ರಷ್ಟಾಚಾರ ಮಾಡದೆ ಕಾನೂನು ನಿಯಮ ಪಾಲಿಸಿಕೊಂಡು ಹೋಗಬೇಕಿದೆ.
ಚುನಾವಣಾ ಸಭೆಗಳಿಗೆ ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಕಡ್ಡಾಯ, ಸರ್ಕಾರಿ ಹಾಗೂ ಅನುದಾನಿತ ಕಟ್ಟಡಗಳ ಬಳಕೆ ನಿಷೇಧವಾಗಿದ್ದು ಪಕ್ಷದ ಪ್ರಚಾರಕರು ಜಾಹಿರಾತಿನ ಪ್ರದರ್ಶನ ಪೋಸ್ಟರ್ ಅಂಟಿಸುವಂತಿಲ್ಲ, ದೇವಾಲಯ, ಮಸೀದಿ, ಚರ್ಚ್, ವಿಹಾರ, ಜಿನಾಲಯ ಮುಂತಾದ ಧಾರ್ಮಿಕ ಸ್ಥಳಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವುದನ್ನು ನಿಷೇದಿಸಲಾಗಿದೆ, ಬಹಿರಂಗ ಪ್ರಚಾರ ಚುನಾವಣೆಗೆ 48ಗಂಟೆ ಮುಂಚಿತವಾಗಿಯೇ ಚುನಾವಣಾ ಅಧಿಕಾರಿಗಳಿಗೆ ತಿಳಿಸಿ ಅನುಮತಿ ಪಡೆಯಬೇಕು ಅಲ್ಲದೆ ಸಭೆ, ಮೆರವಣಿಗೆ, ರ್ಯಾಲಿ, ರೋಡ್ ಶೋ, ತಾರಾ ಪ್ರಚಾರಕರನ್ನು ಬಳಸಿಕೊಳ್ಳುವಾಗ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಪೊಲೀಸ ಅಧಿಕಾರಿಗಳಿಂದ ಲಿಖಿತ ಅನುಮತಿ ಕಡ್ಡಾಯವಾಗಿ ಪಡೆದುಕೊಳ್ಳಬೇಕು, ಕರ್ತವ್ಯದ ಮೇಲಿರುವ ಅಧಿಕಾರಿಗಳೊಂದಿಗೆ ಸೌಜನ್ಯದೊಂದಿಗೆ ವರ್ತಿಸಬೇಕು ಎಂಬಿತರೇ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಎಲ್ಲಾ ಪಕ್ಷದ ಹಾಗೂ ಪಕ್ಷೇತರ ಅಭ್ಯರ್ಥಿಗಳು ಪಾಲಿಸಿ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆಸಲು ಸಹಕರಿಸಿ ಎಂದು ವೈ. ರವಿಕುಮಾರ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ್, ಬಿಜೆಪಿ, ಸಿಪಿಐ, ಎಎಪಿ ಸೇರಿದಂತೆ ಇತರೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು. ಸಹಾಯಕ ಚುನಾವಣಾ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.
One attachment • Scanned by Gmail