ಶಾಂತಿಯುತ ಗಣೇಶ ಚತುರ್ಥಿ, ಈದ್ ಮಿಲಾದ್ ಆಚರಣೆಗೆ ಕ್ರಮ

ಕೋಲಾರ, ಸೆ,೧೨- ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಸೌಹರ್ದಯುತವಾಗಿದ್ದರೆ ಸಮಾಜವು ಅಭಿವೃದ್ದಿ ಹೊಂದಲು ಸಾಧ್ಯವಾಗಲಿದೆ ಈ ನಿಟ್ಟಿನಲ್ಲಿ ಗಣೇಶ ಚತುರ್ಥಿ, ಈದ್ ಮಿಲಾದ್ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಣೆ ಮಾಡೋಣ ಎಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸುವ ಬಗ್ಗೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಗಣೇಶ ವಿಗ್ರಹಗಳ ಪ್ರತಿಷಪನೆಗೆ ಕಡ್ಡಾಯವಾಗಿ ಆಯಾ ಪೊಲೀಸ್ ಠಾಣೆಯಲ್ಲಿ ಏಕಗವಾಕ್ಷಿಯಲ್ಲಿ ಅನುಮತಿ ಪಡೆದು ಪ್ರತಿಷಪನೆ ಮಾಡಬೇಕು. ಈ ಹಿಂದಿನ ಹಳೆಯ ಪದ್ಧತಿ, ನಿಯಮ ಅನುಸರಿಸಿ ಶಾಂತಿಯುತವಾಗಿ ಆಚರಿಸಬೇಕು ಎಂದರು
ಹೊಸದಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಗಣೇಶ ವಿಗ್ರಹಗಳ ಪ್ರತಿಷಪನೆಗೆ ಅವಕಾಶವಿರುವುದಿಲ್ಲ ಹಾಗೂ ಪಿಓಪಿ ಮತ್ತು ಬಣ್ಣದ ವಿಗ್ರಹಗಳನ್ನು ಸ್ಥಾಪಿಸಿ ಪೂಜಿಸಿದ ನಂತರ ಕೆರೆ ಭಾವಿ ಹಾಗೂ ಇನ್ನಿತರೆ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸುವುದು ಸಾಂಪ್ರದಾಯಕವಾಗಿದ್ದು, ಇದರಿಂದಾಗಿ ನೈಸರ್ಗಿಕ ಜಲ ಮೂಲಕ್ಕೆ ತೊಂದರೆಯಾಗುತ್ತದೆ. ಇವುಗಳ ಭೌತಿಕ ಹಾಗೂ ರಾಸಾಯನಿಕ ಗುಣಗಳು ಪರಿಸರದಲ್ಲಿ ಮೇಲೆ ದುಷ್ಟರಿಣಾಮ ಉಂಟಾಗುವುದೆಲ್ಲದೆ ಪ್ರಾಣಿ ಪಕ್ಷಿಗಳಿಗೂ ಜಲಚರಗಳ ಜೀವಕ್ಕೆ ಅಪಾಯ ಉಂಟು ಮಾಡಲಾಗುತ್ತದೆ ಅಲ್ಲದೆ ಸಾರ್ವಜನಿಕರ ಆರೋಗ್ಯಕ್ಕೂ ಧಕ್ಕೆ ಉಂಟಾಗುತ್ತದೆ ಇದರ ಅನ್ವಯ ಕರ್ನಾಟಕ ರಾಜ್ಯ ಮಾಲಿನ ನಿಯಂತ್ರಣ ಮಂಡಳಿಯ ಸದರಿ ಹಬ್ಬದ ಆಚರಣೆಯಿಂದ ನೈಸರ್ಗಿಕ ಜಲಮೂಲಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪತವಾದ ವಿಗ್ರಹಗಳನ್ನು ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ಕೆರೆ ಮತ್ತು ಇತರೆ ಜಲಮೂಲಗಳಲ್ಲಿ ವಿಸರ್ಜಿಸಿವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರವು ಅಗತ್ಯವಾಗಿದೆ ಎಂದು ತಿಳಿಸಿದರು.
ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿ, ಸೌಹಾರ್ಧತೆಯಿಂದ ಆಚರಣೆ ಮಾಡಬೇಕು. ಇಲಾಖೆಯಿಂದ ನೀಡಲಾಗುವ ಸೂಚನೆಗಳನ್ನು ನಿಬಂಧ ಎಂದುಕೊಳ್ಳದೆ ಎಲ್ಲರೂ ಕಾನೂನನ್ನು ಗೌರವಿಸಿ ನಮ್ಮ ಇಲಾಖೆಯಿಂದಲೂ ಸಹಕಾರ ನೀಡುತ್ತೇವೆ ಎಂದು ಹೇಳಿದರು.
ಕೋಲಾರ ಜಿಲ್ಲಾ ಪೊಲೀಸ್ ವರಿಷಧಿಕಾರಿಗಳಾದ ಎಂ ನಾರಾಯಣ್ ಅವರು ಮಾತನಾಡಿ, ಗಣೇಶ ವಿಗ್ರಹಗಳ ಪ್ರತಿಷಪನೆ ಮಾಡಿದ ಸ್ಥಳಗಳಲ್ಲಿ ಬೆಳಕು ಹಾಗೂ ಸಿಸಿಟಿವಿ ವ್ಯವಸ್ಥೆ ಮಾಡಿಕೊಳ್ಳಬೇಕು ಆಯೋಜಕರೇ ಸಂಪೂರ್ಣ ಹೊಣೆ ಆಗಿರುತ್ತಾರೆ ಹಾಗೂ ಅಹಿತಕರ ಘಟನೆಗಳು ನಡೆದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಬೇಕು. ಹಬ್ಬದ ಆಚರಣೆಗಳಲ್ಲಿ ಪ್ರಚೋದನಾಕಾರಿ ಹೇಳಿಕೆ, ಅಸಭ್ಯ ವರ್ತನೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೂಚನೆ ನೀಡಿದರು.
ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಾಂತರಾಜು ಅವರು ಮಾತನಾಡಿ, ಯಾವುದೇ ವಿದ್ಯುತ್ ಅವಘಡಗಳು ನಡೆಯದಂತೆ ಮೂರ್ತಿಗಳ ಕಡಿಮೆ ಎತ್ತರ, ಗಣಪತಿ ಅಲಂಕಾರ ಹಾಗೂ ಸಣ್ಣ ಗೋಪುರಗಳ ನಿರ್ಮಾಣ ಮಾಡಬೇಕು. ಧ್ವನಿವರ್ಧಕಗಳಿಗೆ ನಿಗದಿತ ಸಮಯ ಮಾತ್ರ ಅನುಮತಿ ನೀಡಲಾಗುತ್ತದೆ. ಹಬ್ಬಗಳ ಆಚರಣೆ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆಚರಣೆಗೆ ಬಲವಂತವಾಗಿ ದೇಣಿಗೆ ಸಂಗ್ರಹಿಸಬಾರದು ಎಂದು ಸೂಚನೆ ನೀಡಿದರು.
ನಗರಸಭೆ ಆಯುಕ್ತರಾದ ಶಿವಾನಂದ್ ಅವರು ಮಾತನಾಡಿ, ಗಣಪತಿ ವಿಸರ್ಜನೆಗೆ ಆಯ್ದ ಸ್ಥಳಗಳನ್ನು ಗುರುತಿಸಲಾಗುತ್ತದೆ. ಅಂತಹ ಸ್ಥಳಗಳಲ್ಲಿ ಗಣೇಶನನ್ನು ವಿಸರ್ಜನೆ ಮಾಡಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಾಗರಿಕರೊಬ್ಬರು ಮಾತನಾಡಿ ಹಿಂದೂ ಮುಸ್ಲಿಂ ಎಂಬ ಧರ್ಮಕ್ಕೆ ಧಕ್ಕೆಯಾಗದಂತೆ ಹಬ್ಬಗಳನ್ನು ನಾವೆಲ್ಲರೂ ಸೇರಿ ಶಾಂತಿಯಿಂದ ಆಚರಣೆ ಮಾಡಬೇಕು ನಮ್ಮ ಮಕ್ಕಳಿಗೆ ನಾವೇ ಮಾರ್ಗದರ್ಶಕರು ನಾವು ಮಾಡುವ ಕೆಲಸಗಳು ಹಾಗೂ ನಾವು ಮಾಡುವ ಹಬ್ಬ ಆಚರಣೆಗಳೆ ಮಕ್ಕಳಿಗೆ ಒಳ್ಳೆ ಆಶಾ ಭಾವನೆ ಮೂಡಿಸಬೇಕು ಎಂದು ಅವರ ಭಾವನೆಗಳನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕೋಲಾರ ಡಿವೈಎಸ್‌ಪಿ ಮಲ್ಲೇಶ್, ಕೆಜಿಎಫ್ ಡಿವೈಎಸ್‌ಪಿ ರಮೇಶ್, ಮುಳಬಾಗಿಲು ಡಿವೈಎಸ್‌ಪಿ ನಂದಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.