ಶಾಂತಿಯುತವಾಗಿ ನಡೆದ ಮೊದಲ ಹಂತದ ಚುನಾವಣೆ

ಬಾಗಲಕೋಟೆ: ಡಿ23 : ಜಿಲ್ಲೆಯ ಜಮಖಂಡಿ ಉಪವಿಭಾಗ ವ್ಯಾಪ್ತಿಯಲ್ಲಿ ಮೊದಲ ಹಂತರದ 88 ಗ್ರಾಮ ಪಂಚಾಯತಿಗಳ 1397 ಸ್ಥಾನಗಳಿಗೆ ಶಾಂತಿಯುತವಾಗಿ ನಡೆದಿದ್ದು, ಯಾವುದೇ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿರುವದಿಲ್ಲ.
ಮೊದಲ ಹಂತದ ಚುನಾವಣೆಗೆ ಮತದಾನ ಬೆಳಿಗ್ಗೆ 7 ರಿಂದ ಪ್ರಾರಂಭವಾಗಿದ್ದು, ಪ್ರಾರಂಭದಲ್ಲಿ ಮತದಾನ ಮಂದಗತಿಯಲ್ಲಿ ನಡೆದರು ನಂತರದಲ್ಲಿ ಚುರುಕಾಗಿ ನಡೆಯಿತು. 9 ಗಂಟೆ ಸುಮಾರಿಗೆ ಶೇ.8.1 ರಷ್ಟು ಮತದಾನವಾದರೆ, 11 ಗಂಟೆಗೆ ಶೇ.25.15 ರಷ್ಟು, ಮಧ್ಯಾಹ್ನ 1ಕ್ಕೆ 46.08 ರಷ್ಟು ಹಾಗೂ 3 ಗಂಟೆಗೆ ಶೇ.66.05 ರಷ್ಟು ಮತದಾನವಾದ ಬಗ್ಗೆ ವರದಿಯಾಗಿದೆ.
ಉತ್ಸಾಹ ತೋರಿದ ಮತದಾರರು
ವಿವಿಧ ಗ್ರಾಮದ ಮತಗಟ್ಟೆಗಳಲ್ಲಿ ಮಾಧ್ಯಮ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಮತದಾರರು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಮತದಾನ ಮಾಡಿದ್ದು, ಕಂಡುಬಂದಿತು. ಪುರುಷರಿಗಿಂತ ಮಹಿಳಾ ಮತದಾರರು ಮತಗಟ್ಟೆಯ ಮುಂದೆ ಸರತಿ ಸಾಲಿನಲ್ಲಿ ಹೆಚ್ಚಾಗಿ ನಿಂತಿದ್ದರು. ಬೆಳಿಗ್ಗೆ 11 ಗಂಟೆಗೆ ಬೀಳಗಿ ತಾಲೂಕಿನ ಸುನಗ ಗ್ರಾಮದ ಮತಗಟ್ಟೆ ನಂ.82 ರಲ್ಲಿ ಒಟ್ಟು 931 ಮತದಾರರ ಪೈಕಿ 228 ಮತದಾನವಾಗಿತ್ತು. ಅದರಲ್ಲಿ 97 ಪುರುಷರು, 133 ಮಹಿಳೆಯರು ಮತದಾನ ಮಾಡಿದ್ದರು.
ಕುಂದರಗಿ ಎಲ್‍ಟಿ 1 ಮತ್ತು 2ರ ಮತಗಟ್ಟೆ 135ರಲ್ಲಿ 1046 ಒಟ್ಟು ಮತದಾರರ ಪೈಕಿ 205, ಅರಕೇರಿ ಗ್ರಾಮಕ್ಕೆ ತೆರಳಿದಾಗ ಮತಗಟ್ಟೆ ಸಂ.7ರಲ್ಲಿ 829 ಮತದಾರರ ಪೈಕಿ 240, ಮತಗಟ್ಟೆ 9ರಲ್ಲಿ 815 ಮತದಾರರ ಪೈಕಿ 220, ಮತಗಟ್ಟೆ 10ರಲ್ಲಿ 907 ಮತದಾರರ ಪೈಕಿ 373 ಜನ ಮತ ಚಲಾಯಿಸಿದ್ದರು. ನಂತರ ಕಾತರಕಿಯ 67ನೇ ಮತಗಟ್ಟೆಯಲ್ಲಿ 716 ಪೈಕಿ 267 ಮತದಾರರು ಮತ ಚಲಾಯಿಸಿದರೆ, 66ನೇ ಮತಗಟ್ಟೆಯಲ್ಲಿ 946ಕ್ಕೆ 339, 68ನೇ ಮತಗಟ್ಟೆಯಲ್ಲಿ 743ಕ್ಕೆ 240 ಮತದಾರರು ಮತ ಚಲಾಯಿಸಿದ್ದು ಕಂಡುಬಂದಿತು.
ಮಧ್ಯಾಹ್ನ ಮುಧೋಳನ ವಜ್ರಮಟ್ಟಿ ಗ್ರಾಮಕ್ಕೆ ತೆರಳಿದಾಗ ಮತಗಟ್ಟೆ 67 ರಲ್ಲಿ 940ಕ್ಕೆ 431, ಮತಗಟ್ಟೆ 68 ರಲ್ಲಿ 1050ಕ್ಕೆ 206 ಮತ್ತು ಮತಗಟ್ಟೆ 69ರಲ್ಲಿ 676ಕ್ಕೆ 159 ರಷ್ಟು ಮತದಾರರು ಮತ ಚಲಾಯಿಸಿದ್ದರು. ಮತಗಟ್ಟೆಗೆ ಆಗಮಿಸುವ ಮತದಾರರನ್ನು ಥರ್ಮಲ್ ಸ್ಕ್ಯಾನಿಂಗ್ ಪರೀಕ್ಷೆ ಮತ್ತು ಕೈಗಳಿಗೆ ಸ್ಯಾನಿಟರ್ ನೀಡಲಾಗುತ್ತಿತ್ತು. ಪೊಲೀಸ್ ಸಿಬ್ಬಂದಿಗಳು ಮತದಾರರನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತದಾರರನ್ನು ಸರತಿ ಸಾಲಿನಲ್ಲಿ ನಿಲ್ಲಿಸುವಲ್ಲಿ ನಿರತರಾಗಿದ್ದರು. ವೃದ್ದರಿಗೆ ಅಂಗವಿಕಲರಿಗೆ ವ್ಹೀಲ್ ಚೇರ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮತಗಟ್ಟೆಗಳಿಗೆ ಅಧಿಕಾರಿಗಳ ಭೇಟಿ
ಜಿಲ್ಲಾ ಪಂಚಾಯತ ಸಿಇಓ ಟಿ.ಭೂಬಾಲನ್ ಬೀಳಗಿ ತಾಲೂಕಿನ ಸುನಗ ಮತ್ತು ಅನಗವಾಡಿ ಗ್ರಾಮಗಳಲ್ಲಿ ಮತದಾನ ನಡೆಯುತ್ತಿರುವ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆದ ಬಗ್ಗೆ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರು ಎರಡನೇ ಹಂತದ ಚುನಾವಣೆಗೆ ಸಿದ್ದತೆ ಬಗ್ಗೆ ಹುನಗುಂದ ಮತ್ತು ಇಲಕಲ್ಲ ತಾಲೂಕಿನ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಶಾಂತಿಯುತ ಮತದಾನಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ ವ್ಯವಸ್ಥೆ ಸಹ ಕಲ್ಪಿಸಲಾಗಿತ್ತು. ಅಲ್ಲದೇ ಚುನಾವಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮತ್ತು ಸಂಗ್ರಹಣೆಯನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.