
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಮೇ10: ಜಿಲ್ಲಾಡಳಿತದ ಸಕಲ ಸಿದ್ಧತೆಗಳ ನಡುವೆ ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ ತಿಳಿಸಿದರು.
ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಜಿಲ್ಲೆಯ 1219 ಮತಗಟ್ಟೆಗಳು ಸೇರಿದಂತೆ 25 ವಿಶೇಷ ಮತಗಟ್ಟೆಗಳಲ್ಲಿಯೂ ಶಾಂತಿಯುತ ಹಾಗೂ ಯಾವುದೆ ತೊಂದರೆ ಇಲ್ಲದಂತೆ ಮತದಾನ ಆರಂಭವಾಗಿದೆ. ಚುನಾವಣಾ ಕರ್ತವ್ಯ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ ಮೀಸಲು ಪೊಲೀಸ ಪಡೆಗಳ ಸಹಕಾರದೊಂದಿಗೆ ಶಾಂತಿಯುತ ಮತದಾನ ಆರಂಭವಾಗಿದೆ.
ಮತದಾರರ ವಿವರ:
ವಿಜಯನಗರದ 249956, ಹಡಗಲಿ 191270, ಹಗರಿಬೊಮ್ಮನಹಳ್ಳಿ 229987, ಕೂಡ್ಲಿಗಿ 203753 ಹಾಗೂ ಹರಪನಹಳ್ಳಿಯ 217045 ಮತದಾರರು ಒಳಗೊಂಡಂತೆ 1092011 ಮತದಾರರ ತಮ್ಮ ಹಕ್ಕು ಚಲಾಯಿಸಲು ಆರಂಭಿಸಿದರು.
ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಸೇರಿದಂತೆ ಬಹುತೇಕ ಎಲ್ಲಾ ಪಕ್ಷಗಳು ಹಾಗೂ ಸ್ವತಂತ್ರರು ಬೆಳಿಗ್ಗೆ ಕುಟುಂಬ ಸಮೇತರಾಗಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಕುಟುಂಬ ಸಮೇತರಾಗಿಯೇ ಬಂದು ಮತದಾನ ಮಾಡಲು ಮುಂದಾದರೂ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಆರ್.ಗವಿಯಪ್ಪ ಪತ್ನಿಯೊಂದಿಗೆ ಆಗಮಿಸಿ 31ನೇ ವಾರ್ಡ್‍ನಲ್ಲಿರುವ ಪೂಣ್ಯಮೂರ್ತಿ ಶಾಲೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಅಂತಯೇ ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥಸಿಂಗ್ ಪತ್ನಿ ಸಂಜನಾ ಸಬರ್ದಾ ಸಿಂಗ್ ಜೊತೆ ತಂದೆ ಹಾಗೂ ಪ್ರವಾಸೋದ್ಯಮ ಸಚಿವ ಆನಂದಸಿಂಗ್ ತಾಯಿ ಲಕ್ಷ್ಮೀಸಿಂಗ್, ಅಜ್ಜಿ ಸುನೀತಾಬಾಯಿ, ತಂಗಿ ವೈಷ್ಣವಿಸಿಂಗ್ ಜೊತೆ ತಮ್ಮ ಮತಗಟ್ಟೆ ಬಾಲಕೀಯರ ಪ್ರೌಢಶಾಲೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ಪ್ರತಿ ಮತಕೇಂದ್ರಗಳಲ್ಲಿಯೂ ವಾಹನ ನಿಲುಗಡೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳನ್ನು ಮಾಡಲಾಗಿದ್ದು ಎಲ್ಲವೂ ಸರಿಯಾಗಿದೆ ಜಿಲ್ಲೆಯ 5 ಕ್ಷೇತ್ರಗಳಲ್ಲಿಯೂ ಮತದಾನ ಶಾಂತಿಯುತವಾಗಿ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ ಸಂಜೆವಾಣಿಗೆ ತಿಳಿಸಿದರು.