ಶಾಂತಿಭಂಗ ಶಕ್ತಿ ದಮನಕ್ಕೆ ಕರೆ

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ದಾರ್ ವಲ್ಲಬಾಯಿ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಕೆಕೆಆರ್ ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಕಲಬುರಗಿ ಮೇಯರ್ ವಿ ಶಾಖ ದರ್ಗಿ, ಶಾಸಕರಾದ ಅಲ್ಲಂಪ್ರಭು, ಎಂ.ವೈ ಪಾಟೀಲ್, ಬಿ.ಆರ್. ಪಾಟೀಲ್, ಕನಿಜಾ ಫಾತಿಮಾ ಇದ್ದಾರೆ.

ಕಲಬುರಗಿ,ಸೆ.೧೭:ಸಮಾಜದಲ್ಲಿ ಶಾಂತಿ ಸೌಹಾರ್ದ ಕದಲುವ ಶಕ್ತಿಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ. ಎಲ್ಲರೂ ಜತೆಯಾಗಿ ಮುನ್ನಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಕಲ್ಯಾಣ ಕರ್ನಾಟಕದ ಉತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಹೈದರಾಬಾದ್-ಕರ್ನಾಟಕ ವಿಮೋಚನೆಯ ರೂವಾರಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ದೇಶದಲ್ಲಿಂದು ಅಪಾಯಕಾರಿ ಸ್ಥಿತಿಯಲ್ಲಿರುವ ವಾಕ್‌ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಮೊದಲಾದವುಗಳ ರಕ್ಷಣೆಗೆ ಪ್ರತಿಯೊಬ್ಬನು ಮುಂದಾಗಬೇಕಿದೆ. ಸಮಾಜದಲ್ಲಿ ಶಾಂತಿ ಸೌಹಾರ್ದ ಕದಲುವ ಶಕ್ತಿಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕಿದೆ ಎಂದರು.
ಹೈದರಾಬಾದ್-ಕರ್ನಾಟಕವನ್ನು ದಾಸ್ಯದ ಸಂಕೋಲೆಯಿಂದ ಬಿಡಿಸಿದ ಸರ್ದಾರ್‌ವಲ್ಲಭಭಾಯಿ ಪಟೇಲರು ದೇಶದ ಪ್ರತಿಯೊಬ್ಬ ನಾಯಕನು ಈ ದೇಶ ಸ್ವಾತಂತ್ರ್ಯವಾಗಿದೆ ಹಾಗೂ ಈ ಸ್ವಾತಂತ್ರ್ಯವನ್ನು ರಕ್ಷಿಸುವುದು ಆತನ ಜವಾಬ್ದಾರಿ ಎಂಬುದನ್ನು ಅರಿತುಕೊಳ್ಳಬೇಕು ಎಂದಿದ್ದರು. ಅದರಂತೆ ನಾವೆಲ್ಲರೂ ಒಗ್ಗಟ್ಟಾಗಿ ವಾಕ್‌ಸ್ವಾತಂತ್ರ್ಯ ಧಾರ್ಮಿಕ ಸ್ವಾತಂತ್ರ್ಯ ರಕ್ಷಣೆಗೆ ಮುಂದಾಗಬೇಕಿದೆ ಎಂದರು.
ಅಭಿವೃದ್ಧಿಎಂದರೆ ಕೇವಲ ಹೆದ್ದಾರಿ, ರಸ್ತೆ, ದೊಡ್ಡ ದೊಡ್ಡ ಕಟ್ಟಡಗಳು ಮಾತ್ರವಲ್ಲ, ಜನರಿಗೆ ಉತ್ತಮ ಶಿಕ್ಷಣ, ಆರೋಗ್ಯ ಸೇವೆ, ಆರ್ಥಿಕ ಹಾಗೂ ಸಾಮಾಜಿಕ ಭದ್ರತಾಭಾವವೂ ಮುಖ್ಯವಾಗುತ್ತದೆ. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಆಧ್ಯತೆ ನೀಡಿ ಕೆಲಸ ಮಾಡುತ್ತಿದೆ ಎಂದರು.
ಕಲ್ಯಾಣ ಕರ್ನಾಟಕವನ್ನು ಅಕ್ಷರಶಃ ಕಲ್ಯಾಣ ರಾಜ್ಯವಾಗಿ ಮಾಡುವ ನಮ್ಮ ಸಂಕಲ್ಪ ಪ್ರಶ್ನಾತೀತ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಫಲಿತಾಂಶ ಕೇಂದ್ರಿತ ಕಾರ್ಯಕ್ರಮ ಅನುಷ್ಠಾನದ ಮೂಲಕ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯಲು ಮುಂದಾಗಿದ್ದೇವೆ. ನಿಮ್ಮ ಸಹಕಾರ ನಮಗಿರಲಿ ಎಂದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ೩೭೧ ಜೆ ಕಾಯ್ದೆಯನ್ನು ಜಾರಿ ಮಾಡಿ ೧೦ ವರ್ಷವಾಯಿತು. ೨೦೧೩ರಲ್ಲಿ ೩೭೧ಜೆ ಕಾಯ್ದೆ ಜಾರಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ ಕೂಡಲೇ ೨೦೧೩ರಲ್ಲಿ ರಾಜ್ಯದಲ್ಲಿದ್ದ ನನ್ನ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೂಡಲೇ ಪ್ರದೇಶ ಮಂಡಳಿ ರಚಿಸಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಸ್ಥಳೀಯರಿಗೆ ಮೀಸಲಾತಿ ಸೌಲಭ್ಯ ಒದಗಿಸುವ ಸರ್ಕಾರ ಆದೇಶ ಹೊರಡಿಸುವ ಮೂಲಕ ಈ ಭಾಗದ ಅಭಿವೃದ್ಧಿಯೆ ಹೊಸ ಶಖೆಗೆ ಚಾಲನೆ ನೀಡಿತ್ತು ಎಂಬುದನ್ನು ಮುಖ್ಯಮಂತ್ರಿಗಳು ನೆನಪಿಸಿಕೊಂಡರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಸಮಾನತೆಯ ಹೊಸ ಹಾದಿಯಲ್ಲಿ ಸಾಗಿದ ಬುದ್ಧ, ಬಸವಣ್ಣ, ಡಾ. ಬಿ.ಆರ್‌ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಅಕ್ಷರಶಃ ಅಳವಡಿಸಿಕೊಂಡಿರುವ ಸರ್ಕಾರ ತಮ್ಮದು, ೧೦೦ ದಿನಗಳಲ್ಲಿ ೪ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿ ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದೇವೆ ಎಂದರು.
ಬೆಲೆ ಏರಿಕೆ, ನಿರುದ್ಯೋಗ ಮತ್ತಿತರ ಸiಸ್ಯೆಗಳಿಂದ ತತ್ತರಿಸಿರುವ ನಾಡಿನ ಜನತೆಗೆ ನೇರ ಹಣ ವರ್ಗಾವಣೆ ಮಾಡುವ ಯೂನಿವರ್ಸಲ್ ಬೇಸಿಕ್ ಇನ್‌ಕಂ ಎಂಬ ಹೊಸ ಪರಿಕಲ್ಪನೆಯಡಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.
ಜನಸಾಮಾನ್ಯರ ಖರೀದಿಯ ಶಕ್ತಿ ಹೆಚ್ಚಾದರೆ ಆರ್ಥಿಕತೆಯೂ ಉತ್ತಮಗೊಳ್ಳುತ್ತದೆ. ಇದು ಜಾರಿಗೊಂಡಿರುವ ಗ್ಯಾರಂಟಿ ಯೋಜನೆಗಳು ಸಾಬೀತುಪಡಿಸುತ್ತಿವೆ ಎಂದರು.
ಮಹಿಳೆಯರಿಗೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಸದೃಢರಾಗುವ ಅವಕಾಶವನ್ನು ಶಕ್ತಿ, ಗೃಹಲಕ್ಷ್ಮಿ ಮೂಲಕ ಕಲ್ಪಿಸಿದ್ದೇವೆ. ಇದರ ಅನುಕೂಲ ಮಹಿಳೆಯರನ್ನು ತಲುಪುತ್ತಿದ್ದು, ಇದು ಅವರ ಶಿಕ್ಷಣ ಆದಾಯ ಚಟುವಟಿಕೆಗಳಿಗೆ ಬೆಂಬಲವಾಗಿದೆ ಎಂದರು.
ರಾಜ್ಯಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭವನ್ನು ತಮ್ಮ ಭಾಷಣದಲ್ಲಿ ವಿವರಿಸಿದ ಮುಖ್ಯಮಂತ್ರಿಗಳು, ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ೫ ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಡಾ. ಅಜಯ್‌ಸಿಂಗ್ ಈಗಾಗಲೇ ಸಭೆ ನಡೆಸಿ ೩ ಸಾವಿರ ಕೋಟಿ ಮೊತ್ತದ ಕ್ರಿಯಾಯೋಜನೆ ರೂಪಿಸಿದ್ದಾರೆ. ಜತೆಗೆ ಶಿಕ್ಷಣ ಕ್ಷೇತ್ರದಲ್ಲೂ ಅಮೂಲಾಗ್ರ ಬದಲಾವಣೆ ತರಲು ಶೇ. ೨೫ ರಷ್ಟು ಅನುದಾನ ಶಿಕ್ಷಣಕ್ಕೆ ಮೀಸಲಿಟ್ಟಿದ್ದು, ಈ ಭಾಗದಲ್ಲಿ ಅಕ್ಷರಕ್ರಾಂತಿಗೆ ನಾಂದಿ ಹಾಡಲಾಗಿದೆ ಎಂದರು.
ಬರಪರಿಸ್ಥಿತಿ ನಿವಾರಣೆಗೂ ಸರ್ಕಾರ ಕ್ರಮಕೈಗೊಂಡಿದೆ. ಈಗಾಗಲೇ ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಿ ಬರ ನಿರ್ವಹಣೆ ಕಾರ್ಯಕ್ರಮವನ್ನೂ ಜಾರಿ ಮಾಡಿದ್ದೇವೆ. ಕುಡಿಯುವ ನೀರು ಹಾಗೂ ಮೇವು ಒದಗಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಪರಿಶಿಷ್ಟ ಜಾತಿ ಪಂಗಡದ ಅಭಿವೃದ್ಧಿಗೂ ಸರ್ಕಾರ ಆಧ್ಯತೆ ನೀಡಿ ಅವರ ಕಲ್ಯಾಣಕ್ಕೆ ಸುಮಾರು ೩೪ ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ. ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತಂದು ಪರಿಶಿಷ್ಟರ ಭೂಮಿ ಒಡೆತನದ ಹಕ್ಕನ್ನು ರಕ್ಷಿಸುವ ಕೆಲಸ ಆಗಿದೆ ಎಂದರು.
ಗ್ರಾಂಪಂಚಾಯ್ತಿಯ ಗ್ರಂಥಾಲಯಗಳನ್ನು ಅರಿವು ಕೇಂಧ್ರಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಗ್ರಾಮಪಂಚಾಯ್ತಿಗಳಲ್ಲಿ ಗ್ರಾಮೀಣ ಭಾಗದ ಕೂಲಿಕಾರ್ಮಿಕರ ಮಕ್ಕಳ ಪಾಲನೆಗೆ ಕೂಸಿನ ಮನೆ ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕಖರ್ಗೆ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ಸಿಂಗ್, ಶಾಸಕರುಗಳಾದ ಬಿ.ಆರ್ ಪಾಟೀಲ, ಎಂ.ವೈ ಪಾಟೀಲ, ಅಲ್ಲಮಪ್ರಭುಪಾಟೀಲ, ಶಶೀಲ ನಮೋಶಿ, ತಿಪ್ಪಣ್ಣಪ್ಪ ಕಮಕನೂರ, ಕಲಬುರಗಿ ಮೇಯರ್ ವಿಶಾಖದರ್ಗಿ, ಪ್ರಾದೇಶಿಕ ಆಯುಕ್ತ ಕೃಷ್ಣಭಾಜಪೇಯಿ. ಕೆಕೆಆರ್‌ಡಿಬಿ ಕಾರ್ಯದರ್ಶಿ ಅನಿರುದ್ಧ ಶ್ರವಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಲ್ಯಾಣ ಕರ್ನಾಟಕದ ಉತ್ಸವದ ಸಂಭ್ರಮ ದಿನವಾದ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕಲ್ಯಾಣ ಕರ್ನಾಟಕದ ೭ ಜಿಲ್ಲೆಗಳಲ್ಲಿ ಕೆಕೆಆರ್‌ಡಿಬಿ ವತಿಯಿಂದ ೧೪೫.೫೧ ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ೬೦.೦೫ ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಉದ್ಘಾಟಿಸಿದರು.