
ಕಲಬುರಗಿ,ಅ.28: ನಗರದ ಶಾಂತಿನಗರದಲ್ಲಿನ ವಿವಾಹಿತ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಮೊದಲ ಪತಿಯನ್ನು ಬಂಧಿಸಲಾಗಿದೆ ಎಂದು ನಗರ ಪೋಲಿಸ್ ಆಯುಕ್ತ ಚೇತನಕುಮಾರ್ ಆರ್., ಅವರು ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯೂಟಿ ಪಾರ್ಲರ್ ಕೆಲಸ ಮಾಡುತ್ತಿದ್ದ ಶಾಹೀನಾ ಬಾನು ಗಂಡ ಶೇಖ್ ಹೈದರ್ (35) ಎಂಬ ಮಹಿಳೆಯನ್ನು ಕಳೆದ 20ರಂದು ಕೊಲೆ ಮಾಡಲಾಗಿತ್ತು. ಆ ಕುರಿತು ಮೃತಳ ತಾಯಿ ಶ್ರೀಮತಿ ಇಮಾಮ್‍ಬೀ ಗಂಡ ದಿ. ಸೈಯದ್ ಇಕಬಾಲ್ ಅವರು ಅಶೋಕ್ ನಗರ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೋಲಿಸರು ಮೃತ ಮಹಿಳೆಯ ಮೊದಲ ಪತಿ ಮೂಲತ: ಗುಜರಾತ್ ನಿವಾಸಿ ಹಾಗೂ ಹಾಲಿ ವಸ್ತಿ ಬ್ರಹ್ಮಪೂರ್ ಲಾಲ್‍ಗೇರಿ ಕ್ರಾಸ್‍ನ ನಾನಾ ಹಜರತ್ ದರ್ಗಾ ಹತ್ತಿರದ ನಿವಾಸಿ ಸೈಯದ್ ಜಿಲಾನಿ ತಂದೆ ಸೈಯದ್ ಯುಸೂಫ್ (41) ಎಂಬ ಆಟೋ ಚಾಲಕನಿಗೆ ಬಂಧಿಸಲಾಗಿದೆ ಎಂದರು.
ಕೌಟುಂಬಿಕ ಕಲಹದಿಂದಾಗಿ ಶಾಂತಿನಗರದಲ್ಲಿ ಬಾಡಿಗೆ ಮನೆಯಲ್ಲಿದ್ದ ಶಾಹೀನಾಬಾನುಳನ್ನು ಹೊಡೆದು ಹತ್ಯೆ ಮಾಡಿದ್ದಾಗಿ ಆರೋಪಿ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದರು.
ಗುಜರಾತ್ ರಾಜ್ಯದ ಅಹ್ಮದಾಬಾದ್ ಜಿಲ್ಲೆಯ ವೀರಂಗಮ್‍ನ ಮುನ್ಸಬ್ ತಲಾಬ್ ಏರಿಯಾದ ಸೈಯದ್ ಜಿಲಾನಿ ನಗರದಲ್ಲಿ ಆಟೋ ಚಲಾಯಿಸಿಕೊಂಡು ಜೀವನ ಮಾಡುತ್ತಿದ್ದ. ಆತ ಶಾಹೀನಾಬಾನುವಿನ ಮೊದಲ ಪತಿಯಾಗಿದ್ದು, ಆತನಿಂದ ದೂರವಾಗಿದ್ದ ಶಾಹೀಣಾಬಾನು ನಂತರ ಶೇಖ್ ಹೈದರ್‍ನಿಗೆ ಮದುವೆಯಾಗಿದ್ದಳು. ದಂಪತಿಗೆ ಓರ್ವ ಪುತ್ರಿ ಜನಿಸಿತ್ತು. ನಂತರ ಆತನಿಂದಲೂ ಸಹ ದೂರವಾಗಿದ್ದಳು. ಕಳೆದ 20ರಂದು ನಿಗೂಢ ರೀತಿಯಲ್ಲಿ ಶಾಂತಿನಗರದ ಬಾಡಿಗೆ ಮನೆಯಲ್ಲಿ ಹತ್ಯೆಗೆ ಒಳಗಾಗಿದ್ದಳು.
ದಕ್ಷಿಣ ಉಪ ವಿಭಾಗದ ಸಹಾಯಕ ಪೋಲಿಸ್ ಆಯುಕ್ತ ಭೂತೇಗೌಡ ಅವರ ನೇತೃತ್ವದಲ್ಲಿ ಅಶೋಕ್ ನಗರ ಪೋಲಿಸ್ ಠಾಣೆಯ ಪಿಐ ಅರುಣಕುಮಾರ್, ಸಿಬ್ಬಂದಿಗಳಾದ ವೈಜನಾಥ್, ಗುರುಮೂರ್ತಿ, ಶಿವಲಿಂಗ, ನೀಲಕಂಠರಾಯ್, ಹರಿಕಿಶೋರ್, ಮಲ್ಲಿಕಾರ್ಜುನ್ ಮೇತ್ರೆ, ಚೆನ್ನವೀರೇಶ್ ಅವರು ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿದರು ಎಂದು ಅವರು ಹೇಳಿದರು.