
ಬೀದರ:ಮೇ.6:ಮನುಕುಲದ ಉದ್ಧಾರಕ್ಕಾಗಿ ಇಡೀ ಜಗತ್ತಿಗೆ ಶಾಂತಿಯ ಸಂದೇಶಗಳನ್ನು ಸಾರಿದ ಗೌತಮ ಬುದ್ಧರು ಶಾಂತಿಯ ದೂತರಾಗಿ ಗಂಗೊಳಿಸುತ್ತಾರೆ. ಮನುಷ್ಯ ಸಾರ್ಥಕ ಜೀವನ ನಡೆಸುವಲ್ಲಿ ಗೌತಮ ಬುದ್ಧರ ಸಂದೇಶಗಳನ್ನು ಪಾಲಿಸಿದರೆ ಸಾಕು. ಆ ವ್ಯಕ್ತಿ ಸುಂದರ ಸಮಾಜದ ನಿರ್ಮಾಣದ ರೂವಾರಿಯಾಗುತ್ತಾನೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರರವರು ನುಡಿದರು.
ಅವರು ಬೀದರ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಬುದ್ಧ ಪೂರ್ಣಿಮೆಯ ನಿಮಿತ್ತ ಹಮ್ಮಿಕೊಂಡಿದ್ದ ಗೌತಮ ಬುದ್ಧರ ಜಯಂತಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಅವರು ಮುಂದುವರೆದು ಗೌತಮ ಬುದ್ಧರ ವಾಣಿಯಂತೆ ಸಮಾಜದಲ್ಲಿ ಮಾನವ ಮಹಾ ಮಾನವನಾಗಬೇಕಾದರೆ ದುರಾಸೆ, ದ್ವೇಷ, ಸಣ್ಣತನಗಳನ್ನು ದೂರಮಾಡಿದರೆ ತಾನಾಗಿಯೇ ಮಹಾಮಾನವನಾಗುತ್ತಾನೆ ಎಂದರು.
ಸಮಾರಂಭದಲ್ಲಿ ಬೀದರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಪರಮೇಶ್ವರ ನಾಯಕರವರು ಮಾತನಾಡುತ್ತಾ ಗೌತಮ ಬುದ್ಧರ ಸಂದೇಶ ಸಾರ್ವತ್ರಿಕ ಹಾಗೂ ಸಾರ್ವಕಾಲಿಕವಾಗಿವೆ. ಅವರ ಜೀವನದಲ್ಲಿ ಈ ಹುಣ್ಣಿಮೆಗಳು ಅತ್ಯಂತ ಮಹತ್ವದ್ದಾಗಿವೆ. ಗೌತಮ ಬುದ್ಧರು ಜನಿಸಿದ್ದು, ಜ್ಞಾನ ಪಡೆದದ್ದು ಮಹಾಪರಿನಿರ್ವಾಣ ಹೊಂದಿದ್ದು ಸಹ ಹುಣ್ಣಿಮೆಯ ದಿನವೇ ಆಗಿತ್ತು. ಅವರು ಮನುಕುಲದ ಉದ್ಧಾರಕ್ಕಾಗಿ, ಶಾಂತಿಗಾಗಿ ಇಡೀ ಜೀವನವನ್ನು ಮುಡುಪಾಗಿಟ್ಟವರು. ಆ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಉತ್ತುಂಗ ಶಿಖರಕ್ಕೆ ಕೊಂಡೊಯ್ಯುವಲ್ಲಿ ಗೌತಮ ಬುದ್ಧರ ಜೀವನ, ಆದರ್ಶ, ಸಂದೇಶಗಳು ನಿತ್ಯನೂತನವಾಗಿವೆ ಎಂದರು.
ಸಮಾರಂಭದಲ್ಲಿ ವಿಶೇಷಾಧಿಕಾರಿಗಳಾದ ಡಾ.ರವೀಂದ್ರನಾಥ.ವಿ.ಗಬಾಡಿಯವರು ಹಾಗೂ ವಿವಿಧ ವಿಭಾಗಗಳ ಉಪನ್ಯಾಸಕರು, ವಿದ್ಯಾರ್ಥಿ/ವಿದ್ಯಾರ್ಥಿನಿಯರು, ಶಿಕ್ಷಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು. ಕಾರ್ಯಕ್ರಮವನ್ನು ಡಾ.ರಾಮಚಂದ್ರ ಗಣಾಪೂರ ನಿರೂಪಿಸಿದರು, ಡಾ.ಮಿಲಿನ್‍ರವರು ತ್ರಿಶರಣ ಪಠಿಸಿದರು, ಡಾ.ಶಿವಕುಮಾರ ಸಂಗನ್‍ರವರು ವಂದಿಸಿದರು.