ಶಾಂತಾ ಆಸ್ಪತ್ರೆಯಿಂದ ಬಡ ಜನರಿಗೆ ಉಚಿತ ಚಿಕಿತ್ಸೆ

ಅಫಜಲಪುರ:ಫೆ.23: ಕ್ಷೇತ್ರದ ಶಾಸಕ ಎಂ.ವೈ ಪಾಟೀಲ್ ಫೌಂಡೇಶನ್ ವತಿಯಿಂದ ಕಲಬುರ್ಗಿ ನಗರದಲ್ಲಿರುವ ಶಾಂತಾ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ವತಿಯಿಂದ ಅಫಜಲಪುರ ಮತಕ್ಷೇತ್ರದ ಎಲ್ಲಾ ಬಡ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಡಾ. ಸಂಜೀವಕುಮಾರ ಎಂ.ವೈ ಪಾಟೀಲ್ ತಿಳಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಬಾರಿ ಅಫಜಲಪುರ ಮತಕ್ಷೇತ್ರದಲ್ಲಿ ಮಳೆಗಾಲದ ಅಭಾವ ಮತ್ತು ಬರಗಾಲದ ಹಿನ್ನೆಲೆ ಬಹುತೇಕ ಬಡ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಅವರ ಸಂಕಷ್ಟದಲ್ಲಿ ನಾವು ಭಾಗಿಯಾಗಲು ಈ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದ್ದೇವೆ. ಅಫಜಲಪುರ ಮತಕ್ಷೇತ್ರದ ಬಡ ಜನರು ಯಾವುದೇ ತುರ್ತು ಸಂದರ್ಭ ಮತ್ತು ಯಾವುದೇ ಶಸ್ತ್ರ ಚಿಕಿತ್ಸೆ ಇದ್ದರೂ ಕೂಡ ಅದನ್ನು ಉಚಿತವಾಗಿ ನುರಿತ ತಜ್ಞರಿಂದ ಗುಣಪಡಿಸಲಾಗುವುದು. 50 ಸುಸಜ್ಜಿತ ಬೆಡ್ ಗಳಿರುವ ಆಸ್ಪತ್ರೆಯಲ್ಲಿ ಯಾವುದೇ ಗುರುತಿನ ಚೀಟಿ ತೋರಿಸಿ ಚಿಕಿತ್ಸೆ ಪಡೆಯಬಹುದಾಗಿದೆ. ಈಗಾಗಲೇ ದಿನದ 24 ಗಂಟೆ ಒಂದು ಆಂಬುಲೆನ್ಸ್ ಕಾರ್ಯನಿರ್ವಹಿಸಲು ಸಜ್ಜಾಗಿದ್ದು ಮುಂಬರುವ ದಿನಗಳಲ್ಲಿ ಗ್ರಾಮೀಣ ಭಾಗದ ಎಲ್ಲಾ ಭಾಗಗಳಲ್ಲೂ ಉಚಿತ ಆಂಬುಲೆನ್ಸ್ ಸೇವೆ ಒದಗಿಸಲಾಗುವುದು. ಹೀಗಾಗಿ ಇದರ ಪ್ರಯೋಜನವನ್ನು ಅಗತ್ಯ ಇರುವ ಫಲಾನುಭವಿಗಳು ಪಡೆದುಕೊಳ್ಳುವಂತೆ ಕೋರಿದರು.

ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಪ್ರಕಾಶ ಜಮಾದಾರ, ಹಿರಿಯ ಮುಖಂಡ ಚಂದಪ್ಪ ಕರಜಗಿ, ಅಂಬರೀಶ್ ಬುರಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.