ಶಾಂತಶ್ರೀ ಪ್ರಶಸ್ತಿಗೆ ಡಾ. ಅಜಯಸಿಂಗ್, ಪ್ರೊ. ಚೆನ್ನಾರೆಡ್ಡಿ ಪಾಟೀಲ್ ಆಯ್ಕೆ

ಕಲಬುರಗಿ,ಸೆ.06: ಕನ್ನಡದ ಕಟ್ಟಾಳು ನರಿಬೋಳ್ ಶಾಂತಪ್ಪ ಪಾಟೀಲ್ ಅವರ ಹೆಸರಿನಲ್ಲಿ ಕೊಡಮಾಡುವ ಶಾಂತಶ್ರೀ ಪ್ರಶಸ್ತಿಗೆ ಈ ಬಾರಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಮತ್ತು ಸರ್ವಜ್ಞ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಚೆನ್ನಾರೆಡ್ಡಿ ಪಾಟೀಲ್ ಅವರಿಗೆ ಆಯ್ಕೆ ಮಾಡಲಾಗಿದೆ ಎಂದು ಶ್ರೀ ಶಾಂತಪ್ಪ ಪಾಟೀಲ್ ನರಿಬೋಳ್ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಸೆಪ್ಟೆಂಬರ್ 12ರಂದು ನಗರದ ಕನ್ನಡ ಭವನದಲ್ಲಿ ಸಂಜೆ ಐದು ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.
ದಿ. ಶ್ರೀ ಶಾಂತಪ್ಪ ಪಾಟೀಲ್ ನರಿಬೋಳ್ ಅವರ ಹತ್ತನೇ ಪುಣ್ಯಸ್ಮರಣೆ ನಿಮಿತ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಉದ್ಘಾಟನೆಯನ್ನು ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಅವರು ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಜೇವರ್ಗಿ ತಾಲ್ಲೂಕು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಿದ್ದಲಿಂಗರೆಡ್ಡಿ ಇಟಗಿ, ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಉಸ್ತಾದ್, ಕ್ಲಾಥ್ ಮರ್ಚಂಟ್ಸ್ ಅಸೋಶಿಯೇಶನ್ ಅಧ್ಯಕ್ಷ ಆನಂದ್ ದಂಡೋತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ, ಚಿತ್ತಾಪುರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಮೊಹ್ಮದ್ ಅಜಮತ್ ಮೊಹ್ಮದ್, ಯುವ ಮುಖಂಡ ವಿಜಯಕುಮಾರ್ ಕೇದಾರಲಿಂಗಯ್ಯ ಹಿರೇಮಠ್, ಹುಲ್ಲೂರ್ ಅವರು ಆಗಮಿಸುವರು ಎಂದು ಅವರು ಹೇಳಿದರು.
ದಿವ್ಯ ಸಾನಿಧ್ಯವನ್ನು ಯಾದಗಿರಿ ಜಿಲ್ಲಾ ಮಠಾಧೀಶರ ಒಕ್ಕೂಟದ ಅಧ್ಯಕ್ಷ ದೇವಪುರ ಜಡಿಶಾಂತಲಿಂಗೇಶ್ವರ್ ಸಂಸ್ಥಾನ ಹಿರೇಮಠ್ ಹಾಗೂ ಸ್ಟೇಷನ್ ಬಬಲಾದ್ ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಅತನೂರಿನ ಸಂಸ್ಥಾನ ಹಿರೇಮಠದ ಅಭಿನವ ಗುರುಬಸವ ಶಿವಾಚಾರ್ಯರು ವಹಿಸುವರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ 20 ಜನರಿಗೆ ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
ಶಾಂತಪ್ಪ ಪಾಟೀಲ್ ಅವರು ಕನ್ನಡ ಸಾಹಿತ್ಯ ಪರಿಷತ್ ಜೇವರ್ಗಿ ತಾಲ್ಲೂಕು ಅಧ್ಯಕ್ಷರಾಗಿ ಕನ್ನಡದ ರಥವನ್ನು ಸಮರ್ಪಕವಾಗಿ ಎಳೆದು ಅನೇಕ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುವ ಕಾರ್ಯ ಮಾಡಿದ್ದನ್ನು ತಾಲ್ಲೂಕಿನ ಜನತೆ ಈವತ್ತಿಗೂ ಮರೆತಿಲ್ಲ. ಅಂತಹ ಮೇರು ಕನ್ನಡದ ಕಟ್ಟಾಳು ಅವರ ಹೆಸರು ಚಿರಸ್ತಾಯಿಯಾಗಿರಲು ಇಂತಹ ಜನಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಕನ್ನಡ ಭಾಷೆ, ಸಂಸ್ಕøತಿ ಮತ್ತು ಪರಂಪರೆಗಳ ನೆಲೆಯನ್ನು ಮತ್ತಷ್ಟು ಭದ್ರಗೊಳಿಸುವಲ್ಲಿ ಅಪಾರ ಶ್ರಮಪಟ್ಟಿರುವ ಲಿಂ. ಶಾಂತಪ್ಪ ಪಾಟೀಲ್ ನರಿಬೋಳ್ ಅವರು ಧಾರ್ಮಿಕ ಕ್ಷೇತ್ರದಲ್ಲಿಯೂ ಕೂಡ ಆಧ್ಯಾತ್ಮಿಕ ವಿಷಯಗಳ ಜೊತೆಗೆ ಕನ್ನಡದ ಉಳಿವಿನ ಜನಜಾಗೃತಿ ಮೂಡಿಸುವ ಕಾರ್ಯ ಅವರ ಬದುಕಿನುದ್ದಕ್ಕೂ ಮಾಡಿದ್ದಾರೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶರಣಗೌಡ ಪೋಲಿಸ್ ಪಾಟೀಲ್ ನರಿಬೋಳ್, ಪರಶುರಾಮ್ ದೇಸಾಯಿ ಅವರು ಉಪಸ್ಥಿತರಿದ್ದರು.