ಶಾಂತಲಿಂಗ ಶಿವಾಚಾರ್ಯರ ಬದುಕೇ ಒಂದು ಸಂದೇಶ

ಧಾರವಾಡ ,ಸೆ 2: ತಮ್ಮ ಸನ್ಯಾಸದ ಸುದೀರ್ಘ 89 ವರ್ಷಗಳ ಬದುಕಿನುದ್ದಕ್ಕೂ ಇಷ್ಟಲಿಂಗ ಪೂಜಾ ತಪೆÇೀನುಷ್ಠಾನದ ಸರಳ ಸಾತ್ವಿಕ ಆಚಾರ ವಿಚಾರಗಳ ದಿನಚರಿ ರೂಢಿಸಿಕೊಂಡು ಸದಾ ಭಕ್ತಗಣದ ಉನ್ನತಿಯನ್ನೇ ಬಯಸಿರುವ ಗುರುವರ್ಯರಾದ ಶ್ರೀ ಶಾಂತಲಿಂಗ ಶಿವಾಚಾರ್ಯರ ಬದುಕೇ ಒಂದು ಸಂದೇಶವಾಗಿದೆ ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯರು ಹೇಳಿದರು.
ಅವರು ಸಮೀಪದ ಅಮ್ಮಿನಬಾವಿ ಪಂಚಗ್ರಹ ಹಿರೇಮಠದಲ್ಲಿ ಭಕ್ತರು ಹಮ್ಮಿಕೊಂಡಿದ್ದ ಶ್ರೀ ಶಾಂತಲಿಂಗ ಶಿವಾಚಾರ್ಯರ 90ನೆಯ ವರ್ಧಂತಿ ಮಹೋತ್ಸವ ಹಾಗೂ ತುಲಾಭಾರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಆಶೀರ್ವಚನ ನೀಡಿದರು. ಬಸವ ಪೂರ್ವ ಯುಗದಿಂದಲೂ ವೀರಶೈವ ಧರ್ಮದ ತತ್ವ, ಸಿದ್ಧಾಂತ, ಸಂಸ್ಕೃತಿ ಮತ್ತು ಆಚಾರ್ಯ ಗುರುಪರಂಪರೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ಮುನ್ನಡೆಸಿಕೊಂಡು ಬಂದಿರುವ ಅಮ್ಮಿನಬಾವಿ ಪಂಚಗೃಹ ಹಿರೇಮಠಕ್ಕೆ ಅಪೂರ್ವವಾದ ಚಾರಿತ್ರಿಕ ಘನತೆ ಇದೆ. ಗುರುಕೃಪಾ ಕಾರುಣ್ಯದಲ್ಲಿ ಮಹಾಶಕ್ತಿ ಸಂಚಯವೇ ಇದೆ. ಇದಕ್ಕೆ ಪೂರಕವಾಗಿ ಗುರುಗಳಾದ ಶಾಂತಲಿಂಗ
ತಪೆÇೀಶಕ್ತಿ ನಮ್ಮನ್ನು ಕೈಹಿಡಿದು ಮುನ್ನಡೆಸಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಬೈಲಹೊಂಗಲ ತಾಲೂಕು ದೊಡವಾಡ ಹಿರೇಮಠದ ಶ್ರೀಜಡೆಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಆರಂಭದಿಂದಲೂ ಹೆಸರಿಗೆ ತಕ್ಕಂತೆ ಶಾಂತಚಿತ್ತ ಸ್ವಭಾವವನ್ನು ಮೈಗೂಡಿಸಿಕೊಂಡು ಎಂದೂ ಎಲ್ಲಿಯೂ ಯಾವುದೇ ರಾಜಕೀಯ ಸೋಂಕನ್ನು ಅಂಟಿಸಿಕೊಳ್ಳದೇ ಕೇವಲ ಸಂಸ್ಕಾರ ಸಂಪನ್ನತೆಯ ಧರ್ಮಜಾಗೃತಿಯನ್ನು ಭಕ್ತರಲ್ಲಿ ಮೂಡಿಸಲು ತಮ್ಮ ಅಖಂಡ ಬದುಕನ್ನೇ ಸಮರ್ಪಿಸಿಕೊಂಡ ಕೀರ್ತಿ ಶಾಂತಲಿಂಗ ಶಿವಾಚಾರ್ಯ ಶ್ರೀಗಳಿಗೆ ಸಲ್ಲುತ್ತದೆ ಎಂದರು.
ತುಲಾಭಾರ ಸ್ವೀಕರಿಸಿ ಆಶೀರ್ವಚನ ನೀಡಿದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯರು, ಮಕ್ಕಳಲ್ಲಿ ಸತ್ಯ-ಶುದ್ಧ ಸಂಸ್ಕಾರ, ದೇಶಭಕ್ತಿ, ಸಮಾಜಮುಖಿ ಚಿಂತನೆ, ಗುರು-ಹಿರಿಯರಲ್ಲಿ ಭಕ್ತಿ, ಧರ್ಮನಿಷ್ಠೆ, ಸಹೋದರ ಭಾವದ ಸಮಷ್ಟಿ ಪ್ರಜ್ಞೆ ಬೆಳೆದು ಬಂದಾಗಲೇ ಎಲ್ಲರೂ ಬಯಸುವ ಜನಪರವಾದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಮಠಗಳ ಮೇಲಿರುವ ಬಹುಮುಖ್ಯ ಜವಾಬ್ದಾರಿಯೂ ಇದೇ ಆಗಿದೆ ಎಂದರು.
ಶೋಭಾ ಯರಗಂಬಳಿಮಠ, ಪ್ರೇಮಾ ಗುಡಿ(ರುದ್ರಾಪೂರ), ಪವನಕುಮಾರ ಕುಸೂಗಲ್, ಬಿ.ಸಿ. ಕೊಳ್ಳಿ, ಸೋಮಲಿಂಗಯ್ಯ ಗುಡ್ಡದಮಠ, ಸುನೀಲ ಗುಡಿ, ಹಾರೋಬೆಳವಡಿಯ ವಿರೂಪಾಕ್ಷಪ್ಪ ಜಕ್ಕಣ್ಣವರ, ರಾಮಣ್ಣ ಜಕ್ಕಣ್ಣವರ, ಬಸವರಾಜ ಉಗರಗೋಳ, ಸಂಗಯ್ಯ ಓದಿಸುಮಠ, ಗೋವಾ ರಾಜ್ಯದ ದೀಪಕ ಗೊಡಚಿ, ವಿಜಯನಗರ ಜಿಲ್ಲೆ ಹೊಳಗುಂದಿ ಮತ್ತೂರುಮಠದ ಗುರುಬಸವರಾಜ ಹಾಗೂ ಮರೇವಾಡದ ಬಸಪ್ಪ ಸಲಕಿ ಅವರು ತುಲಾಭಾರ ಸೇವೆಗಳನ್ನು ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಅಮ್ಮಿನಬಾವಿ ಪ್ರಾಥಮಿಕ ಪತ್ತಿನ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುನೀಲ ಗುಡಿ, ತಾ.ಪಂ.ಮಾಜಿ ಸದಸ್ಯ ಸುರೇಂದ್ರ ದೇಸಾಯಿ ಹಾಗೂ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಡಾ.ಗುರುಮೂರ್ತಿ ಯರಗಂಬಳಿಮಠ ಮಾತನಾಡಿದರು.