ಶಹಾಬಾದ ರಸ್ತೆ ನಿರ್ಮಾಣಕ್ಕೆ ಖರ್ಗೆಗೆ ಮನವಿ

ಶಹಾಬಾದ:ಆ.4:ನಗರದ ಹೊರ ವಲಯದ ರಾಜ್ಯ ಹೆದ್ದಾರಿ 125 ವರ್ತುಲ ರಸ್ತೆ ಕಾಮಗಾರಿ ಕಳೆದ ಎರಡು ವರ್ಷಗಳಿಂದ ಸಂಪೂರ್ಣ ಸ್ಥಗಿತಗೊಂಡಿದ್ದು. ಕೂಡಲೇ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಕಾಂಗ್ರೆಸ್ ಮುಖಂಡ ಅನ್ವರ ಪಾಶಾ ನಸೀರುದ್ದೀನ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಂಕ್ ಖರ್ಗೆ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಮರಗೋಳ ಮಹಾವಿದ್ಯಾಲಯದಿಂದ ವಾಡಿ ಕ್ರಾಸ್ ವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಬಸವೇಶ್ವರ ವೃತ್ತದಿಂದ ಮರಗೋಳ ಮಹಾವಿದ್ಯಾಲದವರೆಗಿನ ರಸ್ತೆ ಕಾಮಗಾರಿ ಸ್ಥಗಿತಗೊಂಡಿದೆ. ಇದರಿಂದ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು, ಅನೇಕ ಅಪಘಾತಗಳು ನಡೆದಿವೆ. ಇದೇ ರಸ್ತೆಯಲ್ಲಿ ಮರಗೋಳ ಮಹಾವಿದ್ಯಾಲಯ, ಪ್ರಾಥಮಿಕ ಶಾಲೆ ಇದ್ದು, ವಿದ್ಯಾರ್ಥಿಗಳಿಗೆ ಈ ರಸ್ತೆಯ ಮೇಲೆ ಓಡಾಡುವದು ಕಷ್ಟವಾಗುತ್ತಿದೆ. ಈ ಕುರಿತು ಪತ್ರಿಕೆಗಳ ಮೂಲಕ ಸ್ಥಳೀಯ ಶಾಸಕರ ಗಮನಕ್ಕೆ ತಂದರು ಕ್ಯಾರೇ ಎನ್ನುತ್ತಿಲ್ಲ, ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾದ ತಾವೂ ಸುಮಾರು 3 ಕಿ.ಮೀ. ರಸ್ತೆಯನ್ನು ಯಾವುದಾದರು ಅನುದಾನ ಬಿಡುಗಡೆಗೊಳಿಸಿ, ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.