ಶಹಾಬಾದ: ನಗರಸಭೆ ಕಾಂಗ್ರೇಸ್ ತೆಕ್ಕೆಗೆ

ಶಹಾಬಾದ:ನ.1: ಬಹುದಿನಗಳಿಂದ ಕಾತುರವಾಗಿ ಕಾಯುತ್ತಿದ್ದ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಅಂಜಲಿ ಗಿರೀಶ ಕಂಬಾನೂರ ಅಧ್ಯಕ್ಷೆಯಾಗಿ, ಉಪಾಧ್ಯಕ್ಷ ಸ್ಥಾನಕ್ಕೆ ಸಲೀಮಾಬೇಗಂ ಮಹೆಬೂಬಸಾಬ ಆಯ್ಕೆಯಾಗುವುರ ಮೂಲಕ ನಗರಸಭೆ ಮತ್ತೆ ಕಾಂಗ್ರೇಸ್ ತೆಕ್ಕೆಗೆ ಜಾರಿ ಹಲವು ದಿನಗಳ ಕುತೂಹಲಕ್ಕೆ ತೆರೆ ಎಳೆಯಲಾಯಿತ್ತು.

27 ಸದಸ್ಯ ಬಲದಲ್ಲಿ ಓರ್ವ ಸದಸ್ಯ ಮೃತನಾಗಿದ್ದು, 26 ಜನ ಸದಸ್ಯ ಬಲವನ್ನು ನಗರಸಭೆ ಹೊಂದಿತ್ತು. ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೇಸ್ ಪಕ್ಷದಿಂದ ಅಂಜಲಿ ಕಂಬಾನೂರ್ ಬಿಜೆಪಿಯಿಂದ ಪಾರ್ವತಿ ಪವಾರ ಸ್ಪರ್ಧಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್‍ನ ಸಲೀಮಾಬೇಗಂ ಬಿಜೆಪಿಯಿಂದ ಸುಧಾ ಅನಿಲ ಸ್ಪರ್ಧಿಸಿದರು. ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳು 22 ಮತಗಳನ್ನು ಪಡೆದುಕೊಂಡು ಭರ್ಜರಿಯಾಗಿ ಜಯಶಾಲಿಯಾದರೆ, ಬಿಜೆಪಿಯ ಅಭ್ಯರ್ಥಿಗಳು 4 ಮತಗಳನ್ನು ಪಡೆದುಕೊಂಡು ಪರಭಾವಗೊಂಡರು.

ಚುನಾವಣಾ ಅಧಿಕಾರಿ ಹಾಗೂ ಸೇಡಂ ಸಹಾಯಕ ಆಯುಕ್ತರಾದ ರಮೇಶ ಕೋಲಾರ ಶಹಬಾದ ನಗರಸಭೆ ಅಧ್ಯಕ್ಷೆಯಾಗಿ ಅಂಜಲಿ ಕಂಬಾನೂರ, ಉಪಾಧ್ಯಕ್ಷರಾಗಿ ಸಲೀಮಾಬೇಗಂ ಆಯ್ಕೆ ಆಗಿದ್ದಾರೆಂದು ಅಧಿಕೃತವಾಗಿ ಘೋಷಣೆ ನೀಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಸುರೇಶ ವರ್ಮಾ, ಪೌರಾಯುಕ್ತ ಡಾ.ಕೆ ಗುರುಲಿಂಗಪ್ಪ ನಗರಸಭೆ ಸದಸ್ಯರು ಸಿಬ್ಬಂದಿ ಇದ್ದರು. ಸಿಪಿಐ ಬಿ.ಅಮರೇಶ ಸೂಕ್ತ ಬಂದೋಬಸ್ತ ಏರ್ಪಡಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕರ್ತರ ಜೊತೆ ಬಾಬು ಜಗಜೀವನರಾಮ ಹಾಗೂ ಡಾ. ಅಂಬೇಡ್ಕರ್ ಪ್ರತಿಮೆಗೆ ಮಾರ್ಲಾಪಣೆ ಮಾಡಿ ಸಿಹಿ ಹಂಚಿ ಪಟಾಕಿ ಹಚ್ಚಿ ಸಂಭ್ರಮಿಸಿದರು.