ಶಹಾಬಾದ ಇ.ಎಸ್‌.ಐ.ಸಿ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ: ನವೀಕರಣ ಕಾರ್ಯ ತ್ವರಿತವಾಗಿ ಕೈಗೊಳ್ಳಲು ಸೂಚನೆ

ಕಲಬುರಗಿ,‌ಮೇ. 28: ಶುಕ್ರವಾರ ಜಿಲ್ಲೆಯ ಶಹಾಬಾದ ಪಟ್ಟಣದ ಇ.ಎಸ್.ಐ.ಸಿ ಆಸ್ಪತ್ರೆಗೆ ಭೇಟಿ ನೀಡಿದ ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ನವೀಕರಣ ಕಾರ್ಯ ವೀಕ್ಷಿಸಿ ತ್ವರಿತವಾಗಿ ದುರಸ್ತಿ ಕಾರ್ಯ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹತ್ತು ದಿನಗಳ ಹಿಂದೆ ಆಸ್ಪತ್ರೆಗೆ‌ ಭೇಟಿ ನೀಡಿದ ಸಚಿವರು ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಕೋವಿಡ್ ಕೇರ್ ಸೆಂಟರ್ ಮಾಡುವುದಾಗಿ ತಿಳಿಸಿ ನವೀಕರಣ‌ ಕಾರ್ಯಕ್ಕೆ ನಿರ್ದೇಶನ ನೀಡಿದರು.

ಅದರಂತೆ ಇಂದು ಸಚಿವರು ಆಸ್ಪತ್ರೆಗೆ‌ ಭೇಟಿ ನೀಡಿ, ತಮ್ಮ ಕಾಲು ನೋವು ಲೆಕ್ಕಿಸದೇ ಆಸ್ಪತ್ರೆಯ ಮೊದಲನೇ ಮತ್ತು ಎರಡನೇ ಮಹಡಿ ಸಂಪೂರ್ಣ ಸುತ್ತು ಹಾಕಿ ದುರಸ್ತಿ ಕಾರ್ಯವನ್ನು ವೀಕ್ಷಿಸಿದರು. ಕಟ್ಟಡದ ಮೇಲ್ಭಾಗ ಟೆರೆಸ್ ಮೇಲೆ ಹೋಗಿಯೂ ಅಲ್ಲಿನ ದುರಸ್ತಿ ಕಾರ್ಯವನ್ನು ಸಹ ಕಣ್ಣಾರೆ ಕಂಡರು.

ಈ ಸಂದರ್ಭದಲ್ಲಿ ನವೀಕರಣ ಕಾರ್ಯದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಸಚಿವರು ಪ್ರಸ್ತುತ ನವೀಕರಣ ಕಾರ್ಯಕ್ಕೆ ನಿಯೋಜನೆಗೊಂಡ ಕಾರ್ಮಿಕರ ಸಂಖ್ಯೆಯನ್ನು ದ್ವಿಗುಣ ಮಾಡಿ ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ಕೈಗೊಂಡು ಒಂದು ತಿಂಗಳೊಳಗೆ ಎಲ್ಲಾ ಕಾರ್ಯ ಮುಗಿಸಬೇಕು ಎಂದು ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ಮಹಡಿಯ ದುರಸ್ತಿ ಕಾರ್ಯಕ್ಕೆ ನಾಲ್ಕು ತಂಡಗಳನ್ನು ಮಾಡಿ ಅವರಿಗೆ ಆಸ್ಪತ್ರೆಯ ಪ್ರತ್ಯೇಕ ವಿಂಗ್ ಕೆಲಸದ‌ ಜವಾಬ್ದಾರಿ ಕೊಡಬೇಕು. ಇದರ ಜೊತೆ ಜೊತೆಯಲ್ಲಿ ವಿದ್ಯುತ್ತೀಕರಣ ಕಾರ್ಯವು ಪ್ರತ್ಯೇಕವಾಗಿ ನಡೆಯಬೇಕು. ಆಸ್ಪತ್ರೆ ಸುತ್ತಮುತ್ತ ರಸ್ತೆ ನಿರ್ಮಿಸಬೇಕು. ಕಟ್ಟಡದ ಬಾಗಿಲು, ವಿಂಡೋ, ಗಾಜುಗಳು ಬದಲಾಯಿಸಬೇಕು. ಆಸ್ಪತ್ರೆಯ ವಸತಿ ಗೃಹ ಸಹ ದುರಸ್ತಿ ಮಾಡಬೇಕು. ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಹತ್ತಿಕೊಂಡೆ ಆಸ್ಪತ್ರೆ ಇರುವುದರಿಂದ ಧೂಳು ಬಾರದಂತೆ ಆಸ್ಪತ್ರೆಯ ಕಂಪೌಂಡ್ ಗೋಡೆ ಎತ್ತರ ಮಾಡಿ ಸುತ್ತ ಗಿಡಗಳನ್ನು ನೆಡಬೇಕು. ಇದಲ್ಲದೆ ರಸ್ತೆಗೆ ಸ್ಪೀಡ್ ಬ್ರೆಕರ್ ಹಾಕಿಸಬೇಕು ಎಂದರು.

ಪ್ರಸ್ತುತ 50 ಹಾಸಿಗೆಯ ಈ ಆಸ್ಪತ್ರೆಗೆ ಮುಂದೆ ಪೂರ್ಣ ಪ್ರಮಾಣದ 120 ಹಾಸಿಗೆಯ ಒಂದು ಮಾದರಿ ಆಸ್ಪತ್ರೆಯನ್ನಾಗಿ ಮಾಡಲು ಬೇಕಾಗುವ ಎಲ್ಲಾ ನವೀನ ಮಾದರಿಯ ವೈದ್ಯಕೀಯ ಉಪಕರಣಗಳನ್ನು ಖರೀದಿಸಲಾಗುವುದು. ಇದಕ್ಕಾಗಿ ಅಗತ್ಯ ಉಪಕರಣಗಳ‌ ಪಟ್ಟಿ ನೀಡಬೇಕು ಎಂದು ಡಿ.ಹೆಚ್.ಓ. ಡಾ.ಶರಣಬಸಪ್ಪ ಗಣಜಲಖೇಡ್ ಅವರಿಗೆ ಸೂಚಿಸಿದ ಸಚಿವ ಮುರುಗೇಶ‌ ನಿರಾಣಿ ಅವರು ಡಿ.ಸಿ.ನೇತೃತ್ವದ ಅಧಿಕಾರಿಗಳ ಸಮಿತಿ ಖರೀದಿಗೆ ಸಂಬಂಧಿಸದಂತೆ ಅಂತಿಮಗೊಳಿಸಲಿದೆ ಎಂದರು.

ಆಸ್ಪತ್ರೆ ನವೀಕರಣಕ್ಕೆ ಬೇಕಾಗುವ ಉಪಕರಣ, ಆಗಬೇಕಾದ ಕೆಲಸ‌-ಕಾರ್ಯಗಳ ಪಟ್ಟಿಯನ್ನು ಕೂಡಲೆ ನೀಡುವಂತೆ ಆರೋಗ್ಯ, ಜೆಸ್ಕಾಂ, ಲೊಕೋಪಯೋಗಿ, ಅರಣ್ಯ ಅಧಿಕಾರಿಗಳಿಗೆ ಸಚಿವರು ನಿರ್ದೇಶನ‌ ನೀಡಿದರು.

ಆರೋಗ್ಯ ಸಚಿವರಿಗೆ ದೂರವಾಣಿ ಕರೆ: ಸ್ಥಳದಿಂದಲೆ ಆರೋಗ್ಯ‌ ಸಚಿವ ಡಾ.ಕೆ.ಸುಧಾಕರ ಅವರಿಗೆ ಮೋಬೈಲ್ ಕರೆ‌ ಮಾಡಿ ಮಾತನಾಡಿದ ಮುರುಗೇಶ‌ ನಿರಾಣಿ ಅವರು ಆಸ್ಪತ್ರೆಯ ಹಿನ್ನೆಲೆ ವಿವರಿಸಿ ಇ.ಎಸ್.ಐ.ಸಿ.ಯಿಂದ ಅಸ್ಪತ್ರೆ ನಡೆಸುವುದು‌ ಕಷ್ಟ. ಪ್ರಸ್ತುತ ಆಸ್ಪತ್ರೆ ಪುನರ್ ಆರಂಭಕ್ಕೆ ವೈದ್ಯ ಸಿಬ್ಬಂದಿ ನೀಡುವುದಾಗಿ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಒಪ್ಪಿದ್ದಾರೆ. ಹೀಗಾಗಿ ಇದನ್ನು ಆರೋಗ್ಯ ಇಲಾಖೆಯ ವಶಕ್ಕೆ ಪಡೆದು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಬೇಕೆಂದು ಕೋರಿಕೊಂಡರು.

4.68 ಕೋಟಿ ಅಂದಾಜು ಪಟ್ಟಿ ಸಲ್ಲಿಕೆ: ಲೊಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತ ಶ್ರೀನಿವಾಸ ಮಾತನಾಡಿ 5 ಎಕರೆ ವಿಸ್ತೀರ್ಣದ ಆಸ್ಪತ್ರೆ‌ಯ ನೆಲ ಮಹಡಿ 2600 ಚದುರ ಮತ್ತು‌ ಮೊದಲನೇ‌ ಮಹಡಿ 2404 ಚ.ಅಡಿ ಸೇರಿದಂತೆ ಒಟ್ಟಾರೆ 5004 ಚದುರ ಅಡಿ ಇದ್ದು, ಇದರ ನವೀಕರಣ ಕಾರ್ಯಕ್ಕೆ ಒಟ್ಟು‌ 4.68 ಕೋಟಿ ರೂ.ಗಳ ತಗುಲಲಿದ್ದು, ಅಂದಾಜು ಪಟ್ಟಿ ಡಿ.ಸಿ ಅವರಿಗೆ ಸಲ್ಲಿಸಿದೆ. ಇದರಲ್ಲಿ 2.75 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ದುರಸ್ತಿ, 1.27 ಕೋಟಿ ರೂ. ಗಳಲ್ಲಿ ಪುನರ್ ವಿದ್ಯುತ್ತೀಕರಣ ಕಾಮಗಾರಿ, ಎ.ಸಿ. ಮತ್ತು ಜನರೇಟರ್ ಅಳವಡಿಕೆ ಹಾಗೂ 0.66 ಕೋಟಿ ರೂ. ಗಳಲ್ಲಿ ನೆಲ ಹಾಸು ದುರಸ್ತಿಗೆ ಬೇಕಾಗುತ್ತದೆ ಎಂದು ಸಚಿವರ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಶಾಸಕ‌ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ತಿನ ಶಾಸಕರಾದ ಬಿ.ಜಿ.ಪಾಟೀಲ, ಶಶೀಲ ಜಿ.ನಮೋಶಿ, ಸುನೀಲ ವಲ್ಯಾಪುರೆ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಜೆಸ್ಕಾಂ ಎಂ.ಡಿ. ರಾಹುಲ ಪಾಂಡ್ವೆ, ಹೆಚ್ಚುವರಿ ಎಸ್.ಪಿ. ಪ್ರಸನ್ನ ದೇಸಾಯಿ, ಸಹಾಯಕ ಆಯುಕ್ತ ರಮೇಶ ಕೋಲಾರ, ಡಿ.ಹೆಚ್.ಓ ಡಾ.ಶರಣಬಸಪ್ಪ ಗಣಜಲಖೇಡ್, ಲೊಕೋಪಯೋಗಿ ಇಲಾಖೆಯ ಸೇಡಂ ವಿಭಗಾದ ಇ.ಇ. ಕೃಷ್ಣ ಅಗ್ನಿಹೋತ್ರಿ, ತಹಶೀಲ್ದಾರ ಸುರೇಶ ವರ್ಮಾ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ ಪಾಟೀಲ, ಶಹಾಬಾದ ಅಧಿಸೂಚಿತ ಕ್ಷೇತ್ರ ಸಮಿತಿಯ ಮುಖ್ಯಾಧಿಕಾರಿ ಪೀರಶೆಟ್ಟಿ ಸೇರಿದಂತೆ ಇನ್ನಿತರರು ಇದ್ದರು.