ಶಹಾಪುರ: 25 ರಂದು ಹೊನ್ಕಲ್ ಸಾಹಿತ್ಯ ಪ್ರಶಸ್ತಿ ಪ್ರದಾನ

ಶಹಾಪುರ,ಡಿ.22-ಇಲ್ಲಿನ ಅಲ್ಲಮಪ್ರಭು ಪ್ರಕಾಶನ ಹಾಗೂ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ವತಿಯಿಂದ ಲಿಂ.ಕಾಂತಮ್ಮ-ಲಿಂ.ಶರಣಬಸಪ್ಪ ಹೊನ್ಕಲ್ ಅವರ ಸ್ಮರಣಾರ್ಥವಾಗಿ ಪುಸ್ತಕ ಲೋಕಾರ್ಪಣೆ ಹಾಗೂ ಹೊನ್ಕಲ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿಸೆಂಬರ್ 25 ರಂದು ಮುಂಜಾನೆ 10 ಗಂಟೆಗೆ ಶಹಾಪುರದ ಸಿ.ಬಿ.ಕಮಾನ ಹತ್ತಿರದ ಕಲಬುರ್ಗಿ ಟವರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕಾ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಕಾರ್ಯಕ್ರಮ ಉದ್ಘಾಟಿಸಿ ನಾಡಿನ ಹೆಸರಾಂತ ಐವರು ಲೇಖಕ ಲೇಖಕಿಯರಿಗೆ 2022-2023 ಸಾಲಿನ ಹೊನ್ಕಲ್ ಸಾಹಿತ್ಯದ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಇದೇ ವೇದಿಕೆಯಲ್ಲಿ ಲೇಖಕ ಸಿದ್ಧರಾಮ ಹೊನ್ಕಲ್ ರ “ಲೋಕಸಂಚಾರಿ” ಸಮಗ್ರ ಪ್ರವಾಸ ಕಥನ, “ನುಡಿನೋಟ”, ಹಾಗೂ “ಪ್ರತಿಬಿಂಬ” ಎಂಬ ಎರಡು ವಿಮರ್ಶೆ ಸಂಕಲನ, “ಹೊನ್ಕಲ್‍ರ ಶಾಯಿರಿಲೋಕ”, ಹಾಗೂ ಹೊನ್ಕಲ್‍ರ ಕುರಿತು ಪತ್ರಕರ್ತ ಲೇಖಕ ಶ್ರೀ ಪ್ರಭುಲಿಂಗ ನೀಲೂರೆ ಅವರು ಬರೆದ “ಹೊನ್ನುಡಿಯ ಸಾಧಕ ಸಿದ್ಧರಾಮ’-ಹೀಗೆ ಐದು ಕೃತಿಗಳು ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಲೋಕಾರ್ಪಣೆ ಮಾಡಲಿದ್ದಾರೆ. ಕೃತಿಗಳ ಕುರಿತು ಲೇಖಕ ಡಾ.ಎಚ್.ಎಸ್. ಸತ್ಯನಾರಾಯಣ ಹಾಗೂ ಪತ್ರಕರ್ತ ಪ್ರಭುಲಿಂಗ ನೀಲೂರೆ ಮಾತನಾಡಲಿದ್ದಾರೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಾಲವಾರದ ಡಾ.ಸಿದ್ಧತೋಟೆಂದ್ರ ಶ್ರೀಗಳು ಹಾಗೂ ಶಹಾಪುರದ ಚರಬಸವೇಶ್ವರ ಸಂಸ್ಥಾನ ಮಠದ ವೆ.ಮೂರ್ತಿ ಬಸವಯ್ಯ ಶರಣರು ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಾದಗಿರಿ ಜಿಲ್ಲೆಯ ಕಸಾಪ ಜಿಲ್ಲಾ ಅಧ್ಯಕ್ಷÀ ಸಿದ್ಧಪ್ಪ ಹೊಟ್ಟಿಯವರು ವಹಿಸಲಿದ್ದಾರೆ.
ಹಿರಿಯ ಲೇಖಕ ಡಾ.ಬಸವಪ್ರಭು ಪಾಟೀಲ ಬೆಟ್ಟದೂರು ರಾಯಚೂರು, ಡಾ.ಎಚ್.ಎಸ್. ಸತ್ಯನಾರಾಯಣ ವಿಮರ್ಶಕರು ಚಿಕ್ಕಮಗಳೂರು, ಕಾದಂಬರಿ ಲೇಖಕಿ ಫೌಜಿಯಾ ಸಲಿಂ ದುಬೈ, ಕವಿಯತ್ರಿ ಪದ್ಮಶ್ರೀ ಗೋವಿಂದರಾಜ್ ಭದ್ರಾವತಿ ಹಾಗೂ ಭರವಸೆಯ ಯುವ ಕಥೆಗಾರ ವೀರೇಂದ್ರ ರಾವಿಹಾಳ್ ಬಳ್ಳಾರಿ ಇವರು ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಅದೇ ವೇದಿಕೆಯಲ್ಲಿ ನಡೆಯಲಿರುವ ಗಜಲ್ ಕವಿಗೋಷ್ಠಿ ಅಧ್ಯಕ್ಷತೆಯನ್ನು ಸಾಹಿತಿ ಹಾಗೂ ಸಂಶೋಧಕ ಡಾ.ಮೋನಪ್ಪ ಶಿರವಾಳ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಹಕಾರಿ ಮುಖಂಡ ಕೆ.ಎಸ್.ಕೋಬಾಳ ಹಾಗೂ ಕಸಾಪ ನಿಕಟಪೂರ್ವ ಅಧ್ಯಕ್ಷÀ ಸಿದ್ಧಲಿಂಗಣ್ಣ ಆನೇಗುಂದಿ ವಹಿಸಲಿದ್ದಾರೆ. ಈ ಗಜಲ್ ಕವಿಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕದ ಸುಮಾರು ಇಪ್ಪತ್ತೆರಡು ಹೆಸರಾಂತ ಗಜಲ್ ಲೇಖಕ ಲೇಖಕಿಯರು ಭಾಗವಹಿಸುತ್ತಿದ್ದು ಕಾವ್ಯದ ಹುಡಿಯನ್ನು ಮೈ ಮನಕೆ ತಲುಪಿಸಲಿದ್ದಾರೆ.