ಶಹಾಪುರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಸರ್ಕಾರಕ್ಕೆ ಅಭಿನಂದನೆ: ಶಿರವಾಳ

ಶಹಾಪುರ: ಮೇ.29:ಸರಕಾರದ ಸಚಿವ ಸಂಪುಟ ಸಭೆಯಲ್ಲಿ ರೂ.60ಕೋಟಿ ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಅನುಮತಿ ಸಿಕ್ಕಿರುವುದು ಸರ್ಕಾರದ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಮಾಜಿ ಶಾಸಕ ಗುರುಪಾಟೀಲ ಶಿರವಾಳ ಸರ್ಕಾರಕ್ಕೆ ಮತ್ತು ಪ್ರಯತ್ನ ಹಾಕಿದ ಸುರಪುರ ಶಾಸಕ ಕರ್ನಾಟಕ ನಗರ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಜುಗೌಡ, ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಅಭಿಪ್ರಾಯ ಹಂಚಿಕೊಂಡ ಅವರು ಕುಡಿಯುವ ನೀರಿನ ಯೋಜನೆಯಿಂದ ನಗರಕ್ಕೆ ನೀರಿನ ಬವಣೆಯು ತಪ್ಪಲಿದೆ, ಸಧ್ಯ ರೂ.60ಕೋಟಿ ಪ್ರಸ್ತಾವನೆಗೆ ಮಂಜುರಾತಿ ನೀಡಿದ್ದು, ಉಳಿದ ಹಣ ತಕ್ಷಣವೇ ಬಿಡುಗಡೆ ಮಾಡಬೇಕು, ಇದರ ಜೊತೆಗೆ ಒಳಚರಂಡಿ ಮಂಡಳಿ ಅಧ್ಯಕ್ಷರಾದ ರಾಜುಗೌಡರು ಶಹಾಪುರ ನಗರಕ್ಕೆ ಬಹುದಿನದ ಬೇಡಿಕೆಯಾಗಿರುವ ಒಳಚರಂಡಿ ಯೋಜನೆಗೂ ಕಾಯಕಲ್ಪ ನೀಡಲು ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಮಾಜಿ ಶಾಸಕ ಗುರುಪಾಟೀಲ ತಿಳಿಸಿದ್ದಾರೆ.