ಶಹಾಜಿ ಸ್ಮಾರಕ ಅಭಿವೃದ್ಧಿಗಾಗಿ ಸಿಎಂಗೆ ಮನವಿ ನೀಡುವೆ : ಸಂಭಾಜಿ ರಾಜೆ

ಬೀದರ:ಮೇ.30: ದಾವಣಗೆರೆ ಜಿಲ್ಲೆಯ ಹೊದಗಿರಿ ಗ್ರಾಮದಲ್ಲಿ ಶಿವಾಜಿ ಮಹಾರಾಜರ ತಂದೆ ಶಹಾಜಿ ಮಹಾರಾಜರ ಸಮಾಧಿ ಇದೆ. ಈ ಸ್ಮಾರಕ ಅಭಿವೃದ್ಧಿಗಾಗಿ ಶೀಘ್ರದಲ್ಲಿಯೇ ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ಛತ್ರಪತಿ ಶಿವಾಜಿ ಮಹಾರಾಜರ 13ನೇ ವಂಶಸ್ಥರು ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾದ ಯುವರಾಜ ಸಂಭಾಜಿ ರಾಜೆ ಛತ್ರಪತಿ ತಿಳಿಸಿದರು.
ಬೀದರ ಜಿಲ್ಲೆಯ ಔರಾದ ತಾಲೂಕಿನ ಏಕಂಬಾ ಗ್ರಾಮದಲ್ಲಿ ಗ್ರಾಮಸ್ಥರಿಂದ ನಿರ್ಮಾಣ ಮಾಡಲಾದ ನೂತನ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪುತ್ಥಳಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಶಿವಾಜಿ ಮಹಾರಾಜರಿಗೆ ಮಹಾರಾಷ್ಟ್ರಕ್ಕಿಂತಲೂ ಕರ್ನಾಟಕದಲ್ಲಿ ಹೆಚ್ಚು ಪ್ರೀತಿಸುತ್ತಾರೆ. ಏಕೆಂದರೆ ಶಿವಾಜಿ ಮಹಾರಾಜರ ಬಾಲ್ಯ ಕರ್ನಾಟಕದಲ್ಲಿಯೇ ಕಳೆದಿದ್ದರಿಂದ ನನಗೂ ಹೆಮ್ಮೆ ಎನಿಸುತ್ತಿದೆ. ಹೀಗಾಗಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಗಿರಿ ಗ್ರಾಮದ ಶಹಾಜಿ ಮಹಾರಾಜರ ಸ್ಮಾರಕ ಅಭಿವೃದ್ಧಿಗಾಗಿ ಶೀಘ್ರವೇ ಕರ್ನಾಟಕದ ಸಿಎಂ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಶಿವಾಜಿ ಮಹಾರಾಜರು ಕೇವಲ ಒಂದು ರಾಜ್ಯಕ್ಕೆ ಸೀಮಿತವಲ್ಲ. ಇಡೀ ದೇಶದಲ್ಲಿ ತಮ್ಮ ಉತ್ತಮ ಆಡಳಿತ ನೀಡಿದ್ದಾರೆ. ಸ್ವರಾಜ್ಯದ ಪರಿಕಲ್ಪನೆ ಕೊಟ್ಟವರೇ ಶಿವಾಜಿ ಮಹಾರಾಜರು. ಹೀಗಾಗಿ ಅತ್ಯಂತ ಭಕ್ತಿ ಸಂಭ್ರಮದಿಂದ ಇಂದು ಏಕಂಬಾ ಗ್ರಾಮಸ್ಥರು ಶಿವಾಜಿ ಮಹಾರಾಜರ ಅಶ್ವಾರೂಢ ಪುತ್ಥಳಿ ಅನಾವರಣಗೊಳಿಸಿದ್ದು ಖುಷಿ ಎನಿಸಿದೆ ಎಂದರು.
ಬೆಂಗಳೂರಿನ ಪೂಜ್ಯ ಶ್ರೀ ವೇದಾಂತಾಚಾರ್ಯ ಮಂಜುನಾಥ ಭಾರತಿ ಸ್ವಾಮೀಜಿ ಮಾತನಾಡಿ ಇಡೀ ವಿಶ್ವವೇ ಒಂದು ಮನೆ. ಎಲ್ಲರೂ ನಮ್ಮವರೆಂದು ಶಿವಾಜಿ ಮಹಾರಾಜರು ಈ ಲೋಕಕ್ಕೆ ಒಂದು ಉತ್ತಮ ಸಂದೇಶ ನೀಡಿದ್ದಾರೆ. ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ ಉತ್ತಮ ಕಾರ್ಯ ಮಾಡಿದ್ದಾರೆ. ಮರಾಠಾ ಸಮುದಾಯದ ಸುಮಾರು 18 ಒಳಪಂಡಗಳನ್ನು ಒಂದುಗೂಡಿಸಿ ಸಮನ್ವಯತೆ ಸಾರಿದ್ದಾರೆ. ಶಿವಾಜಿ ಪರಿವಾರ ತ್ಯಾಗ ಮತ್ತು ಪ್ರೀತಿಯ ಪರಿವಾರ. ಆದ್ದರಿಂದಲೇ ಅವರು ನಮಗೆ ಆದರ್ಶಪ್ರಾಯರಾಗಿದ್ದಾರೆ ಎಂದರು. ಗ್ರಾಮದ ಮುಖಂಡರಾದ ಪೃಥ್ವಿರಾಜ ಪಾಟೀಲ ಹಾಗೂ ಸತೀಶ ವಾಸರೆ ಮಾತನಾಡಿ ಇದೊಂದು ಅವಿಸ್ಮರಣೀಯ ಘಟನೆ. ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಅಮೃತ ಘಳಿಗೆ ಎಂದು ಬಣ್ಣಿಸಿದರು.
ಇದೇ ವೇಳೆ ಅದ್ಧೂರಿಯಾಗಿ ಡಿಜೆ ಹಾಡಿನೊಂದಿಗೆ ಹಾಗೂ ಬಣ್ಣ ಬಣ್ಣದ ಹೂಗಳ ಅಲಂಕಾರದೊಂದಿಗೆ ಹಾಗೂ ವಿದ್ಯುತ್ ದೀಪಾಲಂಕಾರದ ಮಧ್ಯೆ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಕರಣ ರಾಜೇಂದ್ರ ಮಹಾರಾಜ್, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ತುಳಸಿಬಾಯಿ ಜಾಧವ, ಅವಿನಾಶ ಭಾರತಿ, ಶ್ರೀರಂಗ ಪಾಟೀಲ ಸೇರಿದಂತೆ ಸಾವಿರಾರು ಹಾಜರಿದ್ದರು.