ಶಸ್ತ್ರ ಚಿಕಿತ್ಸೆ ಮಾಡಲು ಲಂಚ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.31:- ಶಸ್ತ್ರಚಿಕಿತ್ಸೆ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಇಲ್ಲಿನ ಕೆ.ಆರ್. ಆಸ್ಪತ್ರೆ (ಕೃಷ್ಣರಾಜೇಂದ್ರ ಸರ್ಕಾರಿ ಆಸ್ಪತ್ರೆ) ವೈದ್ಯಾಧಿಕಾರಿ ಡಾ. ಪುಟ್ಟಸ್ವಾಮಿಗೆ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಶಸ್ತ್ರ ಚಿಕಿತ್ಸೆಗೆಂದು ಬಂದ ರೋಗಿಯವರ ಕಡೆಯಿಂದ ಹಣ ಪಡೆದ ಆರೋಪದ ಮೇಲೆ ಸಿಕ್ಕಿಬಿದ್ದಿದ್ದ ವೈದ್ಯಾಧಿಕಾರಿ ಡಾ.ಪುಟ್ಟಸ್ವಾಮಿ ಅವರಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಮೈಸೂರಿನ ಲೋಕಾಯುಕ್ತ ವಿಶೇಷ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.
ಎಸ್.ಆರ್.ದೇವರಾಜು ಎಂಬುವರು ಏಳು ವರ್ಷದ ಹಿಂದೆ 2017ರ ಏಪ್ರಿಲ್ 12ರಂದು ತಮ್ಮ ಸಂಬಂಧಿಕರೊಬ್ಬರನ್ನು ಕೆ.ಆರ್.ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗೆಂದು ಕರೆದುಕೊಂಡು ಬಂದಿದ್ದರು. ಈ ವೇಳೆ ಮೂಳೆ ಶಸ್ತ್ರಚಿಕಿತ್ಸಕರಾದ ಡಾ.ಪುಟ್ಟಸ್ವಾಮಿ ಅವರು ಶಸ್ತ್ರಚಿಕಿತ್ಸೆಗೆ 40 ಸಾವಿರ ರೂ.ಗೆ ಬೇಡಿಕೆಯಿಟ್ಟಿದ್ದರು. ಅಂತಿಮವಾಗಿ 26 ಸಾವಿರ ರೂ.ಗೆ ಒಪ್ಪಿದ್ದರು. ಈ ಹಣವನ್ನು ನೀಡುವಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ಡಾ.ಪುಟ್ಟಸ್ವಾಮಿ ಅವರನ್ನು ಬಂಧಿಸಿದ್ದರು.
ಪ್ರಕರಣದ ತನಿಖಾಧಿಕಾರಿಯಾಗಿದ್ದ ಎಸಿಬಿ ಇನ್ಸ್‍ಪೆಕ್ಟರ್ ಶೇಖರ್ ಅವರು ಆರೋಪಿ ಡಾ.ಪುಟ್ಟಸ್ವಾಮಿ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಆರು ವರ್ಷದಿಂದ ಪ್ರಕರಣದ ವಿಚಾರಣೆ ನಡೆದು, ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಭಾಗ್ಯ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.